ಹಾನಗಲ್ಲ: ತಾಲೂಕಿನ ಹಿರೇಬಾಸೂರು ಗ್ರಾಮದ ಸರ್ವೆ ನಂ. 139/ಎ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ವಿುಸಿಕೊಂಡು ವಾಸಿಸುತ್ತಿರುವ ಗ್ರಾಮಸ್ಥರು ಹಕ್ಕುಪತ್ರ ದೊರಕಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.’
ಮನವಿಯಲ್ಲಿ, ಸರ್ಕಾರಿ ಜಮೀನಿನಲ್ಲಿ ಮನೆ ನಿರ್ವಿುಸಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಹಕ್ಕುಪತ್ರ ಇಲ್ಲದ ಕಾರಣ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಬ್ಯಾಂಕ್ಗಳು ಸಾಲ-ಸೌಲಭ್ಯ ಸಹ ನೀಡುತ್ತಿಲ್ಲ. ಹಕ್ಕುಪತ್ರ ನೀಡುವಂತೆ ಅನೇಕ ವರ್ಷಗಳಿಂದ ಸಂಬಂಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಮನೆ ನಿರ್ವಿುಸಿಕೊಂಡು ವಾಸಿಸುತ್ತಿರುವ 13 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ದೊರಕಿಸುವ ಪ್ರಯತ್ನ ನಡೆಸಲಾಗಿದೆ. ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ, 30, 40 ವರ್ಷಗಳ ಸಮಸ್ಯೆ. ದೀರ್ಘಾವಧಿಯ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಹೊಸದಾಗಿ ಕಂದಾಯ ಗ್ರಾಮ, ಉಪ ಗ್ರಾಮ ರಚನೆ ಮಾಡಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ನಿಯಮಾನುಸಾರ ಫಾಮ್ರ್ ನಂ. 57ರಲ್ಲಿ ಅರ್ಜಿ ಸಲ್ಲಿಸಿದ ಅರ್ಹರಿಗೆ ಖಂಡಿತವಾಗಿಯೂ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥರಾದ ರಾಜೂ ಹರಿಜನ, ಉಮೇಶ ಭಜಂತ್ರಿ, ಅತಾವುಲ್ಲಾ ಉಪ್ಪಣಸಿ, ಪ್ರವೀಣ ಹರಿಜನ, ಅಬ್ದುಲಖಾದರ ಮುಲ್ಲಾ, ಅಜ್ಜಪ್ಪ ಬ್ಯಾತನಾಳ, ಮಲ್ಲೇಶ ಪೂಜಾರ, ಫಿದಾ ಹಾನಗಲ್, ಇಸಾಕ್ ಹಾನಗಲ್ ಸೇರಿದಂತೆ ಇನ್ನೂ ಹಲವರು ಇದ್ದರು.