ಮದ್ದೂರು: ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಡಾ.ಬಾಬು ಜಗಜೀವನ್‌ರಾಮ್ ಸಂಘಗಳ ಒಕ್ಕೂಟದಿಂದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪಟ್ಟಣದ ಶಿವಪುರದಲ್ಲಿ ಭಾನುವಾರ ಮನವಿ ಸಲ್ಲಿಸಲಾಯಿತು.
ಮಾದಿಗ ಸಮುದಾಯ ಹಿಂದುಳಿದಿರುವ ಹಿನ್ನೆಲೆಯಲ್ಲಿ ನಮಗೆ ಒಳ ಮೀಸಲಾತಿ ನೀಡುವಂತೆ ಅನೇಕ ರೀತಿಯ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. 2005ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚಿಸಿ ಚಾಲನೆ ನೀಡಿತ್ತು. ನಂತರ ಬಿಜೆಪಿಯ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ಸಂಬಂಧ ವರದಿ ನೀಡಿದು,್ದ ನಂತರ ಬಸವರಾಜ ಬೊಮ್ಮಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಳ ಮೀಸಲಾತಿಯನ್ನು ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ನಂತರ ಈಗಿನ ಸಿದ್ದರಾಮಯ್ಯ ನೇತೃತ್ವದ ಸದಾಶಿವ ಆಯೋಗದ ವರದಿಯನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು.
ಆದರೆ, 2024 ರ ಆ.1 ರಂದು ಸುಪ್ರೀಂಕೋರ್ಟ್‌ನ 7 ಸದಸ್ಯರ ನ್ಯಾಯಮೂರ್ತಿಗಳ ಪೀಠ ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಕಾನೂನು ಬದ್ಧವಾಗಿದ್ದು, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ನೀಡಲು ತೀರ್ಪು ನೀಡಿರುವುದರಿಂದ ಕರ್ನಾಟಕ ಸರ್ಕಾರವು ಕೂಡಲೇ ಅ.18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಒಳ ಮೀಸಲಾತಿ ನೀಡಲು ಯಾವುದೇ ತೊಂದರೆ ಇಲ್ಲದ ಕಾರಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಒಳ ಮೀಸಲಾತಿ ಸಂಬಂಧ ಸರ್ಕಾರಕ್ಕೆ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭವರಸೆ ನೀಡಿದರು.
ಅಖಿಲ ಕರ್ನಾಟಕ ಡಾ.ಬಾಬು ಜಗಜೀವನರಾಮ್ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗಮಂಗಲ ಎನ್.ಆರ್.ಚಂದ್ರಶೇಖರ್, ತಾಲೂಕು ಘಟಕದ ಅಧ್ಯಕ್ಷ ಚಾಮನಹಳ್ಳಿ ಮಂಜು, ಉಪಾಧ್ಯಕ್ಷರಾದ ಸಿ.ಡಿ.ಕುಚೇಲ್, ಸೋಮಶೇಖರ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ಮುಖಂಡರಾದ ಆಲೂರು ಕುಮಾರ್, ನಿಡಘಟ್ಟ ಲೋಕೇಶ್ ಇದ್ದರು.