ತುಮಕೂರು: ಹತ್ತು ವರ್ಷಗಳವರೆಗೂ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಒಮ್ಮೆಯೂ ವರ್ಗಾವಣೆಯಾಗದ ಶಿಕ್ಷಕರಿಗೆ ಅವರ ಮೂಲ ಜಿಲ್ಲೆಗೆ ವರ್ಗಾವಣೆ ಹೊಂದಲು ಅವಕಾಶ ಕಲ್ಪಿಸುವುದು, ಅಂತರ್‌ಘಟಕ ವರ್ಗಾವಣೆಯ ಶೇ.2ರ ಮಿತಿಯನ್ನು ಶೇ.6ಕ್ಕೆ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಘಟಕ ಆಗ್ರಹಿಸಿದೆ.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಬುಧವಾರ ಡಿಡಿಪಿಐ ಎಂ.ಆರ್.ಕಾಮಾಕ್ಷಿ ಅವರನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಭೇಟಿ ಮಾಡಿ, ಶೇ.25 ಖಾಲಿ ಹುದ್ದೆಗಳಿರುವ ತಾಲೂಕಿನಲ್ಲಿ ಶಿಕ್ಷಕರಿಗೆ ವರ್ಗಾವಣೆ ಅವಕಾಶವಿಲ್ಲ ಎಂಬ ನಿಯಮ ರ‌್ದದುಪಡಿಸಬೇಕು. ಆಂಗ್ಲಬಾಷಾ ಶಿಕ್ಷಕರು (ಪಿಎಸ್‌ಟಿ) ವಿಜ್ಞಾನ ಶಿಕ್ಷಕರು(ಪಿಎಸ್‌ಟಿ), ಎಲ್‌ಪಿಎಸ್ ಹಾಗೂ ಹೆಚ್‌ಪಿಎಸ್ ಶಾಲೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ಪತಿ, ಪತ್ನಿ ಪ್ರಕರಣ ಪರಸ್ಪರ ವರ್ಗಾವಣೆಗಳನ್ನು ಸೇವಾವಧಿಯಲ್ಲಿ ಕನಿಷ್ಠ 3 ಬಾರಿಗೆ ಅವಕಾಶ ನೀಡಬೇಕು. ವಲಯ ವರ್ಗಾವಣೆ ‘ಎ’ ವಲಯಕ್ಕೆ ಸೀಮಿತ ಮಾಡದೆ ಎಲ್ಲ ವಲಯದ ಶಿಕ್ಷಕರಿಗೆ ವಲಯ ವರ್ಗಾವಣೆ ಎಂಬ ನಿಯಮ ಜಾರಿಗೊಳಿಸಬೇಕು. ಕಳೆದ ಬಾರಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೊಂಡಿರುವವರಿಗೆ ಈ ಬಾರಿ ಪ್ರಥಮ ಆದ್ಯತೆ ಮೇರೆಗೆ ಎಲ್ಲ ವಿಧದ ವರ್ಗಾವಣೆಗೆ ಅವಕಾಶ ನೀಡಬೇಕು. ಹಿಂದಿ ಶಿಕ್ಷಕರಿಗೆ ಕೌನ್ಸಿಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಖಾಲಿ ಹುದ್ದೆಗಳ ಸೃಷ್ಟಿಮಾಡಬೇಕು ಎಂದು ಒತ್ತಾಯಿಸಿದರು.
2018-19ನೇ ಸಾಲಿನ ಕಡ್ಡಾಯ ವರ್ಗಾವಣೆಗೆ ಸಂಬಂಧಿಸಿದಂತೆ ಬಿಆರ್‌ಪಿ, ಸಿಆರ್‌ಪಿಗಳಿಗೆ ಈ ಬಾರಿ ಪ್ರಥಮ ಆದ್ಯತೆ ವರ್ಗಾವಣೆ ನೀಡಬೇಕು. ಅಂಗವಿಕಲ ಶಿಕ್ಷಕರಿಗೆ ಸೇವಾವಧಿಯಲ್ಲಿ ಒಂದು ಬಾರಿ ವರ್ಗಾವಣೆ ಎನ್ನುವ ನಿಯಮ ರದ್ದುಪಡಿಸಬೇಕು ಎಂದರು.
ಮನವಿ ಸ್ವೀಕರಿಸಿದ ಡಿಡಿಪಿಐ ಎಂ.ಆರ್. ಕಾಮಾಕ್ಷಿ, ಶಿಕ್ಷಕರ ಸಂಘದ ಮನವಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದರು. ಸಂಘದ ಖಜಾಂಚಿ ಸಿ.ಶಿವಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಬಿ.ರವಿಕುಮಾರ್ ಸೇರಿ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಹಾಜರಿದ್ದರು.