ಹನೂರು: ತೋಟದ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡಬೇಕು ಹಾಗೂ ಜಮೀನಿಗಳಲ್ಲಿ ವಶಪಡಿಸಿಕೊಂಡಿರುವ ಪಂಪ್‌ಸೆಟ್ ಸ್ಟಾಟರ್ ಮತ್ತು ವೈರ್‌ಗಳನ್ನು ವಾಪಾಸ್ ನೀಡುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಮಂಗಳವಾರ ರೈತರು ಹನೂರಿನಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಎಲ್ಲೇಮಾಳ ಅಜ್ಜೀಪುರ ವಿಭಜಕ ರಸ್ತೆಯಲ್ಲಿ ಸೇರಿದ್ದ ನೂರಾರು ರೈತರು ಬೈಕ್ ರ‌್ಯಾಲಿಯ ಮೂಲಕ ದಿ. ಎಚ್. ನಾಗಪ್ಪ ಅವರ ವೃತ್ತ ಹಾಗೂ ಸೆಸ್ಕ್ ಉಪ ವಿಭಾಗೀಯ ಕಚೇರಿ ಮುಂಭಾಗ ಆಗಮಿಸಿ ರಸ್ತೆ ಸಂಚಾರ ತಡೆದು ಸೆಸ್ಕ್ ಇಲಾಖೆ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹೊನ್ನೂರು ಪ್ರಕಾಶ್ ಮಾತನಾಡಿ, ಜಮೀನಿನ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ ವೇಳೆ 7ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು. ಜತೆಗೆ ತೋಟದ ಮನೆಗಳಿಗೆ ರಾತ್ರಿ ವೇಳೆ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಸೆಸ್ಕ್ ಇಲಾಖೆ ಪಂಪ್‌ಸೆಟ್‌ಗೆ 3-4 ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ನೀಡುತ್ತಿದೆ. ಇದೀಗ ಬೇಸಿಗೆ ಸಮೀಪಿಸುತ್ತಿರುವುದರಿಂದ ಬೆಳೆಗಳಿಗೆ ಸಮರ್ಪಕ ನಿರೋದಗಿಸಲು ಸಮಸ್ಯೆಯಾಗುತ್ತಿದ್ದು, ಫಸಲು ಒಣಗುವುದಕ್ಕೆ ಕಾರಣವಾಗಿದೆ. ಜತೆಗೆ ರಾತ್ರಿ ವೇಳೆ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ನೀಡದ ಪರಿಣಾಮ ರೈತರು ತೊಂದರೆ ಅನುಭವಿಸುವಂತಾಗಿದೆ. ಇನ್ನು ಕಳೆದ 2-3 ದಿನಗಳಿಂದೀಚೆಗೆ ಕೆಲವು ಜಮೀನುಗಳಿಗೆ ಸೆಸ್ಕ್ ಸಿಬ್ಬಂದಿ ತೆರಳಿ ಏಕಾಏಕಿ ಪಂಪ್‌ಸೆಟ್ ಸ್ಟಾಟರ್ ಹಾಗೂ ವೈರ್‌ಗಳನ್ನು ವಶಕ್ಕೆ ಪಡೆದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೇ ರೈತರು ಕೃಷಿಯಲ್ಲಿ ನಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸೆಸ್ಕ್ ಇಇ ತಬಸುಮ್ ಬಾನು ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿ ಮಾತನಾಡಲು ಮುಂದಾದಾಗ ರೈತರು ರೊಚ್ಚಿಗೆದ್ದು ಮೊದಲು ಸ್ಟಾಟರ್ ಹಾಗೂ ವೈರ್‌ಗಳನ್ನು ವಾಪಸ್ ನೀಡಿ ನಂತರ ಮಾತನಾಡಿ ಎಂದು ಪಟ್ಟು ಹಿಡಿದರು.
ಬಳಿಕ ರೈತರ ಮುಂದೆ ವಿದ್ಯುತ್ ಕಂಡೈನ್ಸರ್ ಇಟ್ಟು ಮಾತನಾಡಿದ ಇಇ ಅವರು, ವಶಕ್ಕೆ ಪಡೆದಿರುವ ಉಪಕರಣ ವಾಪಸ್ ನೀಡಲಾಗುವುದು ಎಂದು ತಿಳಿಸಿದರು. ಜತೆಗೆ ತಾಲೂಕಿನ 3 ಫೀಡರ್‌ಗಳಲ್ಲಿ ಹೆಚ್ಚು ಅಂತರವಿರುವ ಕಾರಣ ವಿದ್ಯುತ್ ಸಮಸ್ಯೆಯಾಗುತ್ತಿದೆ. ಆದರೆ ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಪವರ್ ಸ್ಟೇಷನ್ ಸ್ಥಾಪಿಸಲು ಅನುಮತಿ ಸಿಗುತ್ತಿಲ್ಲ. ಈಗಿರುವಾಗ ಸಿಂಗಲ್ ಫೇಸ್ ವಿದ್ಯುತ್ ಇರುವ ವೇಳೆ ಪಂಪ್‌ಸೆಟ್ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ವಿದ್ಯುತ್ ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಮನದಟ್ಟು ಮಾಡಿಕೊಂಡು ಇದರ ಬಳಕೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿ, ಪಂಪ್‌ಸೆಟ್‌ಗೆ 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಹಾಗೂ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ನೀಡದಿದ್ದಲ್ಲಿ ನಿಮ್ಮ ವಿರುದ್ಧ ಕೇಸ್ ಹಾಕಬೇಕಾಗುತ್ತದೆ ಎಂದು ಸವಾಲು ಹಾಕಿದರು. ಬಳಿಕ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.