ಸೇನಾ ಭವನ್ ನಿರ್ಮಾಣಕ್ಕೆ ಮನವಿ

ಚಾಮರಾಜನಗರ: ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇನಾ ಭವನ್ ನಿರ್ಮಾಣ ಮಾಡಲು ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಸಹಾಯ ಧನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಸೈನಿಕರ ನಿಯೋಗ ಮನವಿ ಸಲ್ಲಿಸಿತು.

ಹನೂರು ಪಟ್ಟಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವ ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ್ ಹಾಗೂ ಶಾಸಕ ಆರ್.ನರೇಂದ್ರ ಅವರನ್ನು ಭೇಟಿ ಮಾಡಿದ ಸೈನಿಕರ ನಿಯೋಗ, ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ನಿವೃತ್ತ ಸೈನಿಕರಿದ್ದು , 40 ಕ್ಕೂ ಹೆಚ್ಚು ಜನ ಪ್ರಸ್ತುತ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಶೇ.70ರಷ್ಟು ವಿದ್ಯಾವಂತರಿದ್ದಾರೆ. ಈ ಭಾಗದ ಸೈನಿಕರು 2ನೇ ವಿಶ್ವಯುದ್ಧ, 1985ರ ಒಪಿ ಬ್ಲೂ ಸ್ಟಾರ್ ಮತ್ತು ಕಾರ್ಗಿಲ್ ಯುದ್ಧಗಳಲ್ಲಿಯೂ ಪಾಲ್ಗೊಂಡು ತಮ್ಮ ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ. ದೇಶಸೇವೆ ಮಾಡಲು ಮಹದಾಸೆ ಹೊಂದಿದ್ದು , ಈ ಸಾಧನೆಗೈಯಲು ಬೇಕಾದ ಪ್ರಾಥಮಿಕ ಸವಲತ್ತುಗಳು ದೊರಕುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸೇನಾ ಭವನ ನಿರ್ಮಿಸಿ
ಈ ಭಾಗದಿಂದ ಸೈನ್ಯಕ್ಕೆ ಹೋಗಿ ಸೇವೆ ಸಲ್ಲಿಸುತ್ತಿರುವವರು, ಸಲ್ಲಿಸಿದ್ದವರು ಮತ್ತು ಪ್ರಾಣತ್ಯಾಗ ಮಾಡಿರುವವರ ಸ್ಮರಣಾರ್ಥ ಹಾಗೂ ಮುಂದಿನ ದಿನಗಳಲ್ಲಿ ಸೇನೆಗೆ ಸೇರಲು ಉತ್ಸುಕರಾಗಿರುವ ಯುವಕ ಯುವತಿಯರಿಗೆ ಪ್ರಾಥಮಿಕ ತರಬೇತಿ ನೀಡುವ ಉದ್ದೇಶದಿಂದ ಸೇನಾ ಭವನ್ ನಿರ್ಮಾಣ ಮಾಡಬೇಕಾಗಿದೆ. ಈ ಮಹತ್ಕಾರ್ಯಕ್ಕೆ ಸರ್ಕಾರದ ವತಿಯಿಂದ ನಿವೇಶನ ಮಂಜೂರು ಮಾಡಿಸಿಕೊಡುವಂತೆ ಮತ್ತು ಕಟ್ಟಡ ನಿರ್ಮಾಣಕ್ಕೆ ಸಹಾಯ ಧನ ಒದಗಿಸುವಂತೆ ಸಚಿವರ ಮುಖೇನ ಪತ್ರ ಬರೆದಿದ್ದಾರೆ.

ಲೂಯಿಸ್ ಪೆರಿಯನಾಯಗಂ, ಮರಿಯಾ ಜೋಸೆಫ್, ಮೋಹನ್, ಅರುಳ್ ಸೆಲ್ವ ಕುಮಾರ್, ಪಾರುಲ್, ಜಾನ್ ಥಾಮಸ್ ಇತರರಿದ್ದರು.