ಡಿಎಫ್‌ಒಗೆ ಮನವಿ ಸಲ್ಲಿಕೆ

ವಿರಾಜಪೇಟೆ: ಕೊಡಗಿನ ರೈತರು, ಕಾಫಿ ಬೆಳೆಗಾರರು, ಕಾರ್ಮಿಕರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿರುವ ಸಮಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯದಂಚಿನಲ್ಲಿ ಕಾಫಿ ತೋಟಗಳನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕಾಫಿ ಬೆಳೆಗಾರರಿಗೆ ಅರಣ್ಯ ಇಲಾಖಾಧಿಕಾರಿಗಳು ಜಮೀನು ತೆರವುಗೊಳಿಸಲು ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ವಿರಾಜಪೇಟೆಯ ಡಿಎಫ್‌ಒ ಮರಿಯಾ ಕೃಷ್ಟರಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

1941ನೇ ಇಸವಿಯಿಂದಲೂ ಹೈಸೊಡ್ಲೂರು ಭಾಗದ ಸರ್ವೆ ನಂ.1/1ರಲ್ಲಿ 50ಕ್ಕೂ ಅಧಿಕ ಕುಟುಂಬಗಳು ಅರಣ್ಯ ಭೂಮಿಯಲ್ಲಿ ಕಾಫಿ ತೋಟಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಭಾಗದಲ್ಲಿ ಇರುವ ಸರ್ವೆ ನಂ.ನಲ್ಲಿ 230 ಎಕರೆ ಭೂಮಿಯು ಪ್ರಸ್ತುತ ರೈತರ ಸ್ವಾದೀನದಲ್ಲಿದೆ. ಕುರುಬರ ಬೋಜ, ರಾಜು, ಮರಿ ಹಾಗೂ ಇನ್ನಿತರ ಪರಿಶಿಷ್ಟರ ಕುಟುಂಬಗಳು ಈ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇವರಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರ ಲಭಿಸಿದ್ದರೂ ತಿತಿಮತಿ ಉಪವಿಭಾಗದ ಅರಣ್ಯಾಧಿಕಾರಿಗಳು ದಿನಾಂಕ 2018 ಅ.15ರಂದು ಕುರುಬರ ಬೋಜ, ರಾಜು, ಮರಿ ಎಂಬುವರಿಗೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ್ದರು.
ಮನವಿ ಸ್ವೀಕರಿಸಿದ ಡಿಎಫ್‌ಒ ಮರಿಯಾ ಕೃಷ್ಣರಾಜು ಮಾತನಾಡಿ 1991ರಲ್ಲಿ ಅರಣ್ಯ ಇಲಾಖೆಯ ಸೆಕ್ಷನ್ 4ರ ಪ್ರಕಾರ ಹೈಸೊಡ್ಲೂರು ಭಾಗದ ಸರ್ವೆ ನಂ.1/1ರಲ್ಲಿ ಇರುವ 230.07ಎಕೆ ಭೂಮಿಯು ಮೀಸಲು ಅರಣ್ಯಕ್ಕೆ ಸೇರಿರುವ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಆಗಿದೆ. ಈ ಜಾಗದ ಮೇಲೆ ಯಾರಿಗೂ ಅಧಿಕಾರ ಇರುವುದಿಲ್ಲ. ಕೊಂಗಣ ಭಾಗದ ಸರ್ವೆ ನಂ 161ರಲ್ಲಿ 7.98, ಎಕರೆ, 162ರಲ್ಲಿ 158.06 ಎಕರೆ ಜಾಗವು ಮೀಸಲು ಅರಣ್ಯಕ್ಕೆ ಸೇರಿದೆ. ಆದ್ದರಿಂದ ಇಲಾಖೆಯ ನಿಯಮ ಪ್ರಕಾರ ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಈ ವೇಳೆ ಹುದಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೈಸೊಡ್ಲೂರು ಸುತ್ತಮುತ್ತ ಗ್ರಾಮದ 50ಕ್ಕೂ ಅಧಿಕ ಕಾಫಿ ಬೆಳೆಗಾರರು ಉಪಸ್ಥಿತರಿದ್ದರು.