ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ

ಹನೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರು, ಸಂಘದ ಹಲವರು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ ಅಂಗವಿಕಲರ ಬ್ಯಾಕ್‌ಲಾಗ್ ಹುದ್ದೆಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಭರ್ತಿ ಮಾಡಬೇಕು. ನೀಡುತ್ತಿರುವ ಮಾಸಾಶನವನ್ನು ಹೆಚ್ಚು ಮಾಡಬೇಕು. ನಕಲಿ ಅಂಗವಿಕಲರ ಹಾವಳಿ ತಪ್ಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವಂತೆ ಮನವಿ ಮಾಡಿದರಲ್ಲದೇ ಸರ್ಕಾರದಿಂದ ಹೆಚ್ಚಿನ ಸವಲತ್ತು ನೀಡುವಂತೆ ಮನವಿ ಮಾಡಿದರು.

ಮನವಿ ಆಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ಹಲವು ಜವಬ್ದಾರಿಗಳು ನನ್ನ ಮೇಲಿದೆ. ಆದ್ದರಿಂದ ಸ್ವಲ್ಪ ಕಾಲಾವಕಾಶ ಅಗತ್ಯವಿದೆ. ತದನಂತರದಲ್ಲಿ ನಿಮ್ಮ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಇನ್ನಿತರರಿದ್ದರು.