ಬೀದರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

ವಿಜಯವಾಣಿ ಸುದ್ದಿಜಾಲ ಬೀದರ್
ಸಿಎಂ ಎಚ್.ಡಿ. ಕುಮಾರಸ್ವಾಮಿ ಬೀದರ್ ಜಿಲ್ಲೆ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದು, ನೀರಾವರಿ ಯೋಜನೆಗಳ ಅನುಷ್ಠಾನ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ತಿಳಿಸಿದರು.
ಗಣರಾಜ್ಯೋತ್ಸವ ನಿಮಿತ್ತ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಣ್ಣ, ಬೃಹತ್ ನೀರಾವರಿ, ಪ್ರವಾಸೋದ್ಯಮ ಸೇರಿ ವಿವಿಧ ಇಲಾಖೆಗಳಿಗೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದ್ದು, ಸಚಿವರು, ಜನಪ್ರತಿನಿಧಿಗಳು ಸೇರಿ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದು ಭರವಸೆ ನೀಡಿದರು.
ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯನ್ನು ಅಕ್ಟೋಬರ್ 2ರೊಳಗೆ ಬಯಲು ಶೌಚಮುಕ್ತ ಮತ್ತು ಸ್ವಚ್ಛ, ಸುಂದರವಾಗಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ)ಗೆ ಇನ್ನುಳಿದ 19 ಕೋಟಿ ರೂ. ಮತ್ತು ಬ್ರಿಮ್ಸ್ ಆಸ್ಪತ್ರೆ ಕಾರ್ಡಯಾಲಾಜಿ ಸೆಂಟರ್ನ ಕ್ಯಾಥ್ ಲ್ಯಾಬ್ ಆರಂಭಿಸಲು 8 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ. ಕಾರಂಜಾ ಅಣೆಕಟ್ಟಿನಿಂದ ಭಾಲ್ಕಿ ಪಟ್ಟಣ ಮತ್ತು ಸುತ್ತಲಿನ 23 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, 2020ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಸಚಿವರು ತಮ್ಮ ಭಾಷಣದುದ್ದಕ್ಕೂ ರಾಜ್ಯ ಸಕರ್ಾರದ ಕಾರ್ಯಸಾಧನೆ ಬಗ್ಗೆ ಹೊಗಳಿದರು. ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಗತಿ ಕಾರ್ಯ ಮೇಲೆ ಬೆಳಕು ಚೆಲ್ಲಿದರು. ಇದಕ್ಕೂ ಮುನ್ನ ಸಚಿವರು ವಿವಿಧ ತುಕುಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಜಿಪಂ ಸಿಇಒ ಮಹಾಂತೇಶ ಬೀಳಗಿ, ಎಸ್ಪಿ ಟಿ.ಶ್ರೀಧರ್, ಅಪರ ಡಿಸಿ ರುದ್ರೇಶ ಗಾಳಿ, ಹೆಚ್ಚುವರಿ ಎಸ್ಪಿ ಶ್ರೀಹರಿಬಾಬು, ಎಸಿ ಶಿವಕುಮಾರ ಶೀಲವಂತ, ತಹಸೀಲ್ದಾರ್ ಕೀರ್ತಿ ಚಾಲಕ್ ಇತರರಿದ್ದರು. ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಖಾಶೆಂಪುರ ಅಸಮಧಾನ: ಇತ್ತೀಚೆಗೆ ಲಿಂಗೈಕ್ಯರಾಗಿರುವ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸದ್ದಕ್ಕೆ ಸಚಿವ ಬಂಡೆಪ್ಪ ಖಾಶೆಂಪುರ ಬೇಸರ ವ್ಯಕ್ತಪಡಿಸಿದರು. ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಮನಕ್ಕೆ ತರಲಾಗಿತ್ತು. ಆದರೆ ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದರು.