
ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ರಾಜ್ಯ ಕಳುಹಿಸಿದ್ದ ನಾರಾಯಣಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿರುವುದರ ವಿರುದ್ಧ ಬುಧವಾರ ನಗರದಲ್ಲಿ ನಾರಾಯಣಗುರುಗಳ ಮೂರ್ತಿ ಇರಿಸಿ ಮೆರವಣಿಗೆ ನಡೆಸಲಾಯಿತು. ನಗರದ ಹಲವೆಡೆ ಬಿಲ್ಲವ ಸಂಘಟನೆಗಳು, ಸಿಪಿಐಎಂ, ಕಾಂಗ್ರೆಸ್ ಪಕ್ಷ ವತಿಯಿಂದ ಮೆರವಣಿಗೆ ನಡೆಯಿತು. ಕಾಂಗ್ರೆಸ್ ನಾಯಕರು ಬೆಳಗ್ಗೆಯೇ ಗರೋಡಿ ಬಳಿಯಿಂದ ಮೆರವಣಿಗೆ ಕೈಗೊಂಡರು. ಸಿಪಿಐಎಂ ಪಕ್ಷ ಸದಸ್ಯರು ಬುಧವಾರ ಮಧ್ಯಾಹ್ನ ಕ್ಲಾಕ್‌ಟವರ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಯಾತ್ರೆ ನಡೆಸಿದರು.
ಸಾಯಂಕಾಲ ಸ್ವಾಭಿಮಾನದ ನಡಿಗೆ: ಸಾಯಂಕಾಲ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಗರೋಡಿಯಿಂದ ಲೇಡಿಹಿಲ್‌ವರೆಗೆ ಮೆರವಣಿಗೆ ನಡೆಯಿತು. ನಗರದ ವಿವಿಧೆಡೆಗಳಿಂದ ಆಗಮಿಸಿದ ಹಲವು ತಂಡಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ, ಮೂರ್ತಿ ಇರುವ ಟ್ಯಾಬ್ಲೊಗಳೊಂದಿಗೆ ಇದರಲ್ಲಿ ಸೇರಿಕೊಂಡವು. ಸಾವಿರಾರು ಕಾರು, ದ್ವಿಚಕ್ರ ವಾಹನಗಳು ಮೆರವಣಿಗೆಯಲ್ಲಿದ್ದವು. ಲೇಡಿಹಿಲ್ನಿಂದ ಸ್ವಾಭಿಮಾನದ ನಡಿಗೆ ಕುದ್ರೋಳಿ ಕ್ಷೇತ್ರದವರೆಗೆ ನಡೆಯಿತು. ಸಾವಿರಾರು ಮಂದಿ ನಾರಾಯಣಗುರು ಅಭಿಮಾನಿಗಳು ಸೇರಿದ್ದರು.
ಗರೋಡಿಯಿಂದ ವಾಹನಗಳಲ್ಲಿ ಬಂದ ಮಂದಿ ಲೇಡಿಹಿಲ್‌ನಿಂದ ಪಾದಯಾತ್ರೆ ನಡೆಸಿದರು. ದಾರಿಯುದ್ದಕ್ಕೂ ಹಳದಿ ಧ್ವಜ, ಬಂಟಿಂಗ್‌ಗಳಿಂದ ಸಿಂಗರಿಸಲಾಗಿತ್ತು. ವಾಹನಗಳಲ್ಲಿ ಜನ ನಾರಾಯಣ ಗುರುಗಳ ಭಜನೆ ಮಾಡುತ್ತ ಬರುವುದು ಕಂಡುಬಂತು.