ಏಕತೆ, ಸಮಾನತೆ ತತ್ವದಡಿ ಸಹಬಾಳ್ವೆ ನಡೆಸುವುದು ಅಗತ್ಯ

ಅಂಗಡಿ ಕಾಲೇಜಿನಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ

ಬೆಳಗಾವಿ: ಭಾರತದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಹೀಗಾಗಿ ನಮ್ಮ ಪ್ರಜಾತಂತ್ರ ವ್ಯವಸ್ಥೆಯು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಏಕತೆ, ಸಮಾನತೆ, ಸಹಬಾಳ್ವೆ ತತ್ವಗಳ ಪಾಲನೆ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ ಹೇಳಿದರು.
 
ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನೆ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಾರತವು ಜಗತ್ತಿನಲ್ಲಿ ಮುಂಚೂಣಿಯಲ್ಲಿರಲು ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್‌ ಮುಂತಾದ ಮಹನೀಯರ ಆದರ್ಶಗಳನ್ನು ಪಾಲಿಸಬೇಕು ಎಂದರು.
 
ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಮಾತನಾಡಿ, ಸ್ವಾತಂತ್ರ್ಯ ಹಾಗೂ ದೇಶದ ಸಮಗ್ರತೆಗೆ ಒತ್ತು ನೀಡುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಮೂಲಭೂತ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ಪಾಲಿಸುತ್ತಾ ಸಂವಿಧಾನವನ್ನು ಗೌರವಿಸಬೇಕೆಂದು ಹೇಳಿದರು.
 
ಅಂಗಡಿ ಇಂಟರ್ ನ್ಯಾಷನಲ್ ಸ್ಕೂಲಿನ ಮುಖ್ಯೋಪಧ್ಯಾಯಿನಿ ಆಶಾ ರಜಪೂತ, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಇನಾಮದಾರ, ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಎಲ್ಲ ವಿದ್ಯಾಲಯಗಳ ಶಿಕ್ಷಕವೃಂದ, ಎಲ್ಲ ವಿಭಾಗಗಳ ಮುಖ್ಯಸ್ಥರುಗಳು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.