ಬೆಂಗಳೂರು: ನನೆಗುದಿಗೆ ಬಿದ್ದಿದ್ದ ವಿಧಾನಸಭೆ ಮತ್ತು ವಿಧಾನ ಪರಿಷತ್ತನ್ನು ಆನ್ಲೈನ್ಗೊಳಿಸುವ ಪ್ರಕ್ರಿಯೆ ‘ಇ ವಿಧಾನ್’ ಮತ್ತೆ ಚುರುಕು ಗೊಂಡಿದೆ. ಇದೇ ವೇಳೆ ಸಚಿವಾಲಯವನ್ನು ಇ-ತಂತ್ರಾಂಶ ವ್ಯಾಪ್ತಿಗೆ ತರುವ ಕೆಲಸವೂ ಭರದಿಂದ ಸಾಗಿದೆ.
ಇ-ವಿಧಾನ್ ಮತ್ತು ಪೇಪರ್ಲೆಸ್ ಕಾರ್ಯವಿಧಾನದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಜನಪ್ರತಿನಿಧಿಗಳನ್ನು ಮೊದಲ ಬಾರಿಗೆ ಪ್ರಕ್ರಿಯೆಯೊಳಗೆ ತರಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ವಿಧಾನಸಭೆ ಮತ್ತು ಪರಿಷತ್ ಕಲಾಪವನ್ನು ಪೇಪರ್ಲೆಸ್ ಗೊಳಿಸುವ ನಿಟ್ಟಿನಲ್ಲಿ ಕೆ.ಬಿ.ಕೋಳಿವಾಡ ಅವರು ಸ್ಪೀಕರ್ ಆಗಿದ್ದಾಗಲೇ ಪ್ರಯತ್ನ ನಡೆದಿತ್ತು. ಬಳಿಕ ನನೆಗುದಿಗೆ ಬಿದ್ದಿತ್ತು. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಹಣ ಬಳಕೆ ಮಾಡಿಕೊಳ್ಳುವ ಸಂಬಂಧ ಮತ್ತು ಅನುಷ್ಠಾನ ವಿಚಾರದಲ್ಲಿ ಬೇರೆ ಬೇರೆ ಅಭಿಪ್ರಾಯ ಬಂದಿದ್ದವು. ಹಿಮಾಚಲ ವಿಧಾನಸಭೆ ಈಗಾಗಲೇ ಇ-ವಿಧಾನ್ ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಅದೇ ಮಾದರಿಯನ್ನಿಟ್ಟುಕೊಂಡು ಇಲ್ಲೂ ಅನುಷ್ಠಾನ ಮಾಡಲು ಪ್ರಯತ್ನ ನಡೆದಿತ್ತಾರೂ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದ ಅವಧಿಯಲ್ಲಿ ಪ್ರಕ್ರಿಯೆ ಸ್ಥಗಿತವಾಗಿತ್ತು.
ಇದೀಗ ಈ ಕಾರ್ಯಕ್ಕೆ ಮರು ಚಾಲನೆ ದೊರೆತಿದ್ದು, ತೊಡಕುಗಳ ನಿವಾರಣೆಗೆ ಇಲಾಖಾ ಮುಖ್ಯಸ್ಥರ ಸಭೆ ನಡೆಸಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ವೇಳಾಪಟ್ಟಿ ನಿಗದಿ ಮಾಡಿಕೊಟ್ಟಿದ್ದರು. ಹಿಮಾಚಲ ಪ್ರದೇಶದಲ್ಲಿ ಬಳಕೆ ಮಾಡಿರುವ ಸಾಫ್ಟ್ ವೇರ್ ಮಾದರಿಯನ್ನೇ ಇಲ್ಲೂ ಬಳಸಿ ಒಂದಷ್ಟು ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಜತೆಗೆ ಪಾರಂಪರಿಕ ಕಟ್ಟಡವೆನಿಸಿದ ವಿಧಾನಸೌಧಕ್ಕೆ ಧಕ್ಕೆ ಬಾರದಂತೆ ಪರಿಕರಗಳ ಇನ್ಸ್ಟಲೇಷನ್ಗೂ ನೀಲಿನಕ್ಷೆ ಸಿದ್ಧವಾಗುವ ಹಂತ ತಲುಪಿದೆ.
ಇ-ವಿಧಾನ್ ಜತೆ ಕಚೇರಿ ವ್ಯವಹಾರಗಳು ಪೇಪರ್ಲೆಸ್ ಆಗಿಸುವ ಉದ್ದೇಶದಿಂದ ಇ-ಆಫೀಸ್ ತಂತ್ರಾಂಶ ವ್ಯವಸ್ಥೆ ಬಳಸಿಕೊಳ್ಳಲಾಗುತ್ತದೆ. ಈ ಪದ್ಧತಿ ಜಾರಿಗೆ ಬಂದ ಬಳಿಕ ಪತ್ರ ವ್ಯವಹಾರ, ಕಡತ ರವಾನೆಯನ್ನೂ ಇ-ಮೇಲ್ ಮೂಲಕವೇ ನಡೆಸಲಾಗುತ್ತದೆ.
ಇ-ಆಫೀಸ್, ನೇವಾಗೆ ಮೊದಲ ಹೆಜ್ಜೆ ಇಟ್ಟಿದ್ದೇವೆ. ಉತ್ತಮ ಸ್ಪಂದನೆ ಸಿಕ್ಕಿದೆ. ಪರಿಷತ್ ವ್ಯಾಪ್ತಿಯಲ್ಲಿ ಶೇ.80 ಐಡಿ ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ. ಎರಡೂ ಕಡೆಯಿಂದೆ ಸ್ಪಂದನೆ, ಪ್ರತಿ ಸ್ಪಂದನೆ ಇದ್ದಾಗ ಸುಸೂತ್ರವಾಗಿ ಕಾರ್ಯನಿರ್ವಹಣೆಯಾಗುತ್ತದೆ.
| ಮಹಾಲಕ್ಷ್ಮೀ ಕಾರ್ಯದರ್ಶಿ, ವಿಧಾನ ಪರಿಷತ್
ಇ-ಮೇಲ್ನಲ್ಲೇ ವ್ಯವಹಾರ
ವಿಧಾನ ಪರಿಷತ್ತಿನ ಕಾರ್ಯಗಳನ್ನು ಗಣಕೀಕರಣಗೊಳಿಸಲು ಇ-ಆಫೀಸ್ ತಂತ್ರಾಂಶ ಹಾಗೂ ನೇವಾ (ಇ-ವಿಧಾನ್) ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಾಸಕರಿಗೆ ಪ್ರತ್ಯೇಕ ಇ-ಮೇಲ್ ಐಡಿ ಸೃಜಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕಳೆದ 20 ದಿನಗಳಲ್ಲಿ ಶೇ.80 ಶಾಸಕರು ಪರಿಷತ್ ಕೋರಿಕೆಗೆ ಸ್ಪಂದಿಸಿದ್ದಾರೆ. ಹೊಸದಾಗಿ ರಚನೆಯಾಗುವ ಇ-ಮೇಲ್ ಐಡಿಯ ಪಾಸ್ವರ್ಡ್
ಶಾಸಕರುಗಳ ಮೊಬೈಲ್ ಸಂಖ್ಯೆಗೆ ಬರುವುದರಿಂದ ತಾವು ಉಪಯೋಗಿಸುತ್ತಿರುವ ಮೊಬೈಲ್ ಸಂಖ್ಯೆಯನ್ನು ಗಣಕ ಕೇಂದ್ರ ಶಾಖೆಗೆ ತುರ್ತಾಗಿ ನೀಡಬೇಕೆಂದು ಕೋರಲಾಗಿತ್ತು. ಬಹುತೇಕರು ಒದಗಿಸಿದ್ದಾರೆ. ಶೀಘ್ರವೇ ಪರಿಷತ್ನ ಪತ್ರವ್ಯವಹಾರ
ಇ-ಮೇಲ್ಗೆ ರವಾನೆಯಾಗಲಿದೆ. ಹಂತಹಂತವಾಗಿ ಕಾಗದ ವ್ಯವಹಾರ ಪೂರ್ಣ ಕೊನೆಯಾಗುವುದು. ಸದಸ್ಯರ ಅಪೇಕ್ಷೆ, ಅಪೇಕ್ಷೆಗೆ ಸಚಿವಾಯಲದ ಉತ್ತರ, ದಾಖಲೆಗಳು ಸಹ ಇ-ಮೇಲ್ ಮೂಲಕವೇ ರವಾನೆಯಾಗುವ ವ್ಯವಸ್ಥೆ ಜಾರಿಗೆ ಬರಲಿದೆ.