ಬೇಲೇನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆಯೇ ಅಡ್ಡಿ

ತರೀಕೆರೆ: ಸಮುದ್ರದ ಜತೆ ನಂಟಿದ್ದರೂ ಉಪ್ಪಿಗೆ ಮಾತ್ರ ಬಡತನ ಎಂಬ ಗಾದೆ ಮಾತು ತಾಲೂಕಿಗೆ ಅಕ್ಷರಶಃ ಅನ್ವಯಿಸುವಂತಿದೆ. ಲಕ್ಕವಳ್ಳಿ ಗಡಿಭಾಗದಲ್ಲಿ ಭದ್ರಾ ಅಣೆಕಟ್ಟಿದ್ದರೂ ಕುಡಿಯವ ನೀರಿಗೆ ರೂಪಿಸಿರುವ ಬಹುಗ್ರಾಮ ಯೋಜನೆ ಮಾತ್ರ ಪೂರ್ಣಗೊಳ್ಳದೆ ಹನಿ ನೀರಿಗೂ ಪರಿತಪಿಸುವಂತಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೇಲೇನಹಳ್ಳಿ ಸುತ್ತಮುತ್ತಲಿನ 21 ಗ್ರಾಮಗಳಿಗೆ ಭದ್ರಾ ನೀರು ಪೂರೈಸಲು ಸರ್ಕಾರ ಬಹುಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಆಮೆಗತಿಯಲ್ಲಿ ಸಾಗಿದೆ. ಈ ವರ್ಷವಾದರೂ ಭದ್ರೆ ಮನೆ ಮನೆಗೆ ಹರಿದು ದಾಹ ನೀಗಿಸುತ್ತಾಳೆಂಬ ನಿರೀಕ್ಷೆ ಹುಸಿಯಾಗಿದೆ.

ಹತ್ತು ವರ್ಷದ ಹಿಂದೆ ಆರಂಭಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರೇ ಕಂಟಕವಾಗಿದ್ದಾರೆ. ಮೊದಲ ಹಂತದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಹಣ ದುರ್ಬಳಕೆ ಮಾಡಿಕೊಂಡಿದ್ದರಿಂದ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ ದೀರ್ಘ ಕಾಲದವರೆಗೆ ನನೆಗುದಿಗೆ ಬಿದ್ದಿತ್ತು. ಸರ್ಕಾರ ಮತ್ತೆ 5.39 ಕೋಟಿ ರೂ. ಬಿಡುಗಡೆಗೊಳಿಸಿ ಮರು ಟೆಂಡರ್ ಕರೆದು ಮತ್ತೆ ಕಾಮಗಾರಿ ಆರಂಭಿಸಿದೆ.

ದಶಕ ಕಳೆದರೂ ಸಿಗದ ಅನುಮತಿ: ವಿವಿಧ ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿಗೆ ರಾಗಿಬಸವನಹಳ್ಳಿ ಅರಣ್ಯ ಪ್ರದೇಶದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್​ಹೆಡ್ ಟ್ಯಾಂಕ್ ನಿರ್ಮಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿ ಪೈಪ್​ಲೈನ್ ಅಳವಡಿಸುವ ಎರಡನೇ ಹಂತದ ಕಾಮಗಾರಿ ಬಾಕಿ ಉಳಿದಿದೆ. ಓವರ್​ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಪೈಪ್ ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಯೋಜನೆ ಆರಂಭವಾಗಿ ದಶಕ ಕಳೆದರೂ ಎರಡೂ ಇಲಾಖೆಯ ಅನುಮತಿ ಸಿಗದಿರುವುದು ಈ ಭಾಗದ ಜನರ ದೌರ್ಭಾಗ್ಯ.

ಯೋಜನೆ ವ್ಯಾಪ್ತಿಯ ಗ್ರಾಮಗಳು: ಬೇಲೇನಹಳ್ಳಿ, ಪಿರಮೇನಹಳ್ಳಿ, ಹಾದಿಕೆರೆ, ರಾಗಿಬಸವನಹಳ್ಳಿ, ಎಚ್.ಮಲ್ಲೇನಹಳ್ಳಿ, ನಾಗೇನಹಳ್ಳಿ, ಲಕ್ಷ್ಮೀಸಾಗರ, ಅಮೃತಾಪುರ, ಕುಂಟಿನಮಡು, ವಿಠಲಾಪುರ, ನೇರಲಕೆರೆ, ಮೇದಿಹಳ್ಳಿ, ಕಾರನಘಟ್ಟ, ಅತ್ತಿಮೊಗ್ಗೆ, ಹೊಸಹಳ್ಳಿ ತಾಂಡಾ, ನರಸೀಪುರ, ಮಾಕನಹಳ್ಳಿ, ಬೆಟ್ಟತಾವರೆಕೆರೆ, ಸೊಕ್ಕೆ, ಕಲ್ಲುಶೆಟ್ಟಿಹಳ್ಳಿ, ಅಜ್ಜಂಪುರ.

ಭದ್ರಾ ಬಲದಂಡೆಯಿಂದ ನೀರು: ಎಂ.ಸಿ.ಹಳ್ಳಿ ಗ್ರಾಮದ ಭದ್ರಾ ಬಲದಂಡೆ ನಾಲೆ ಮೂಲಕ ನೀರು ಹರಿಸುವ ಯೋಜನೆಗೆ ನಾಲೆ ಬಳಿ ಜಾಕ್​ವೆಲ್ ನಿರ್ಮಾಣ ಮಾಡಲಾಗಿದೆ. ಇಟ್ಟಿಗೆ ಗ್ರಾಮದಲ್ಲಿ 10 ಕೋಟಿ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಾಗಾರ, 3 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಿಸುವ ತೊಟ್ಟಿ ಹಾಗೂ ವಾಟರ್ ಪ್ರೆಷರ್ ಫಿಲ್ಟರ್ ನಿರ್ವಿುಸಲಾಗಿದೆ. ರಾಗಿ ಬಸವನಹಳ್ಳಿಯಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್​ಹೆಡ್ ಟ್ಯಾಂಕ್ ನಿರ್ವಿುಸಿ ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ ಎಲ್ಲಾ ಗ್ರಾಮಗಳಿಗೂ ನೀರು ಹರಿಸಲಾಗುವುದು.

ನಿಗದಿಗಿಂತ ಹೆಚ್ಚು ಅನುದಾನ: ಯೋಜನೆ ಅನುಷ್ಠಾನಗೊಂಡಾಗ 6.80 ಕೋಟಿ ರೂ.ಗೆ ಮಂಜುರಾತಿ ಸಿಕ್ಕಿತ್ತಾದರೂ ಕಾಮಗಾರಿ ನನೆಗುದಿಗೆ ಬಿದ್ದು ಮರು ಟೆಂಡರ್ ಹೊತ್ತಿಗೆ 18.39 ಕೋಟಿ ರೂ. ಯೋಜನೆಗೆ ಖರ್ಚಾಗಿದೆ. ಶೀಘ್ರವೇ ಕಾಮಗಾರಿ ಮುಗಿದು ಜನರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಮಂಜುನಾಥ್.

ಕಳಪೆ ಕಾಮಗಾರಿ ಆರೋಪ: ಮರು ಟೆಂಡರ್ ಆದ ಬೇಲೇನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಇಟ್ಟಿಗೆ ಗ್ರಾಮದ ಬಳಿ ನಿರ್ವಿುಸುತ್ತಿರುವ 3 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಸಂಗ್ರಹಾಗಾರ ತೊಟ್ಟಿ ಸಂಪೂರ್ಣ ಕಳಪೆಯಾಗಿದೆ. ತರಾತುರಿಯಲ್ಲಿ ಕಾಮಗಾರಿ ನಿರ್ವಹಿಸುವ ಭರದಲ್ಲಿ ಗುತ್ತಿಗೆದಾರರು ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ಕಾಮಗಾರಿಗೆ ಮಣ್ಣು ಮಿಶ್ರಿತ ಮರಳು ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.

Leave a Reply

Your email address will not be published. Required fields are marked *