ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು ಮತ್ತು ಪ್ರತಿಪಕ್ಷ ನಾಯಕ- ಶಾಸಕಾಂಗ ನಾಯಕ ಸ್ಥಾನ ಪ್ರತ್ಯೇಕವಾಗಬೇಕೆ? ಎಂಬ ವಿಚಾರದಲ್ಲಿ ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯವಿರುವ ಮೂರನೇ ವರದಿ ಹೈಕಮಾಂಡ್ ಕೈ ಸೇರಿದೆ.
ಮೊದಲು ಮಧುಸೂದನ್ ಮಿಸ್ತ್ರಿ ಬೆಂಗಳೂರಿಗೆ ಆಗಮಿಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಬಳಿಕ ಗುಲಾಂ ನಬಿ ಆಜಾದ್ ಅಭಿಪ್ರಾಯ ಕೇಳಿದ್ದರು. ಇದೀಗ ಡಾ.ಜಿ.ಪರಮೇಶ್ವರ್ ತಮ್ಮ ಮನೆಯಲ್ಲಿ ನಡೆಸಿದ ಸಭೆ ವಿವರವನ್ನು ಹೈಕಮಾಂಡ್ಗೆ ಸಲ್ಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಅನಿವಾರ್ಯ ಎಂದು ಎಲ್ಲ ನಾಯಕರು ಹೇಳಿದ್ದಾರೆ, ಆದರೆ ಯಾರಾಗಬೇಕೆಂಬ ವಿಚಾರದಲ್ಲಿ ಒಮ್ಮತ ಮೂಡಿಲ್ಲ ಎಂಬ ಅಂಶ ವರದಿಯಲ್ಲಿದೆ ಎನ್ನಲಾಗಿದೆ. ಜತೆಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ- ಪ್ರತಿಪಕ್ಷ ನಾಯಕ ಸ್ಥಾನ ಪ್ರತ್ಯೇಕಗೊಳಿಸುವ ಬಗ್ಗೆ ಹೆಚ್ಚಿನವರು ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೇರಿರುವ ಕಾರಣ ಅದೇ ಸಮುದಾಯದವರನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಿದರೆ ಹೆಚ್ಚಿನ ಉಪಯೋಗವಾಗಲ್ಲ ಎಂಬ ಮಾತು ಪಕ್ಷದಲ್ಲಿದೆ. ಈ ಎಲ್ಲ ಸಂಗತಿಗಳೂ ಹೈಕಮಾಂಡ್ ಗಮನಕ್ಕೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ವಾರದಲ್ಲೇ ರಾಜ್ಯದ ಪ್ರಮುಖ ನಾಯಕರನ್ನು ಆಹ್ವಾನಿಸುವ ಹೈಕಮಾಂಡ್, ಸಭೆ ನಡೆಸಿ ಅಭಿಪ್ರಾಯ ನೀಡಲಿದೆ. ಜ.15ರ ಬಳಿಕ ಹೊಸ ಅಧ್ಯಕ್ಷರು ಪದಗ್ರಹಣ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.
ನನಗೂ ಕೆಪಿಸಿಸಿ ಅಧ್ಯಕ್ಷನಾಗಬೇಕೆಂಬ ಅಪೇಕ್ಷೆಯಿದೆ. ಈ ಕುರಿತು ವರಿಷ್ಠರಿಗೆ ಪತ್ರ ಬರೆದಿದ್ದೇನೆ. ಜ.9ಕ್ಕೆ ನವದೆಹಲಿಗೆ ತೆರಳಿ ವರಿಷ್ಠರಿಗೆ ಮನವಿ ಮಾಡುತ್ತೇನೆ. ಡಿ.ಕೆ.ಶಿವಕುಮಾರ್ ಆಗಲಿ ಯಾರೇ ಆಗಲಿ. ರಾಜಕೀಯ ನಿಂತ ನೀರು ಆಗಬಾರದು. ಪಕ್ಷ ಸಂಘಟನೆ ಮುಖ್ಯ. ಪಕ್ಷ ಮುನ್ನಡೆಸುವ ಜವಾಬ್ದಾರಿ ಕೊಟ್ಟರೆ ನಿಭಾಯಿಸಬಲ್ಲೆ.
| ಕೆ.ಎನ್.ರಾಜಣ್ಣ ಮಾಜಿ ಶಾಸಕ