ಕೆಲ ವಿಜ್ಞಾನಿಗಳ ವರದಿ ಸತ್ಯಕ್ಕೆ ದೂರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೀಕರ ಪ್ರಕೃತಿ ವಿಕೋಪ ಸಂಭವಿಸಿದ್ದು, ಈ ಬಗ್ಗೆ ಕೆಲ ‘ಸೊ ಕಾಲ್ಡ್’ ವಿಜ್ಞಾನಿಗಳು ತಯಾರಿಸಿದ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದರು.

ನಗರದ ಬಾಲಭವನದಲ್ಲಿ ಶುಕ್ರವಾರ ನಡೆದ ಮಡಿಕೇರಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಉಂಟಾದ ಜಲಪ್ರಳಯ ಹಾಗೂ ಭೂಕುಸಿತದಿಂದಾಗಿ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಮನೆ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೀಗಿದ್ದಾಗ ಕೆಲ ‘ಸೊ ಕಾಲ್ಡ್’ ವಿಜ್ಞಾನಿಗಳು ಸುಳ್ಳು ವರದಿ ತಯಾರಿಸುವ ಮೂಲಕ ಜಿಲ್ಲೆಯ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಪ್ರಾಮಾಣಿಕವಾಗಿ ಕೊಡಗಿನ ಸಂಪೂರ್ಣ ಸರ್ವೇ ನಡೆಸಿ ವರದಿ ತಯಾರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ನಡೆಯುತ್ತಿದ್ದು, ನೆಮ್ಮದಿಯ ವಾತಾವರಣವೇ ಇಲ್ಲದಂತಾಗಿದೆ. ಕಾನೂನು ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ಇದರಿಂದಲೇ ತಿಳಿಯುತ್ತದೆ. ಇಂತಹ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿ ಆಡಳಿತ ಇದೆಯೋ, ಇಲ್ಲವೋ ಎಂಬಂತಾಗಿದೆ. ಅಷ್ಟೇ ಅಲ್ಲದೆ ಮಂತ್ರಿಗಳ ಹಾಗೂ ಅಧಿಕಾರಿಗಳ ಅಭಿಪ್ರಾಯವೂ ಭಿನ್ನವಾಗಿರುತ್ತದೆ. ಇವೆಲ್ಲವನ್ನೂ ಗಮನಿಸಿದರೆ ಇಂತಹ ಸರ್ಕಾರದಿಂದ ಕಿಂಚಿತ್ತೂ ಪ್ರಯೋಜನವಿಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.

ಮಡಿಕೇರಿ ಶಾಸಕರು ಮಾತನಾಡಿ, ಹಿಂದೆ ದಿಡ್ಡಳ್ಳಿ ನಿರಾಶ್ರಿತರಿಗೆ ವಸತಿ ಕಲ್ಪಿಸಿದ ರೀತಿಯಲ್ಲಿ ಚಿಕ್ಕದಾಗಿ ಕಡಿಮೆ ವೆಚ್ಚದ ಮನೆ ನಿರ್ಮಾಣ ಮಾಡಿದಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು. ಮುಂದಿನ ಮೇ ಒಳಗಾಗಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ಒತ್ತಾಯಿಸಿದರು.

ಸೋಮವಾರಪೇಟೆ, ಕುಶಾಲನಗರ ಹಾಗೂ ವಿರಾಜಪೇಟೆಯ ಪಟ್ಟಣ ಪಂಚಾಯಿತಿ ಚುನಾವಣೆಯ ದೃಷ್ಟಿಯಿಂದ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಒಂದೊಂದು ವಾರ್ಡ್‌ಗಳ ಜವಾಬ್ದಾರಿ ತೆಗೆದುಕೊಳ್ಳಬೇಕು. ಆ ಮೂಲಕ ಪಕ್ಷದ ಅಧಿಕಾರವನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಬೇಕು. ಮಡಿಕೇರಿ ತಾಲೂಕಿನಲ್ಲಿ 13 ವಿಎಸ್‌ಎಸ್‌ಎನ್‌ಗಳ ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಪಕ್ಷದ ಪ್ರಮುಖರಾದ ಕೊಡಪಾಲು ಗಣಪತಿಯವರು ನಿರಾಶ್ರಿತರ ಪರಿಹಾರ ನಿಧಿಗೆಂದು 10 ಸಾವಿರ ರೂ. ದೇಣಿಗೆಯನ್ನು ಎಂಎಲ್ಸಿ ಸುನೀಲ್ ಸುಬ್ರಮಣಿ ಅವರ ಬಳಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ಬಿಜೆಪಿ ಹಿರಿಯ ಮುಖಂಡ ಎಂ.ಬಿ.ದೇವಯ್ಯ, ಪಕ್ಷದ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ತಾಪಂ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.