ಭಯ ಸರಿಸಿ ಅಭ್ಯಸಿಸಿ

ಬೆಂಗಳೂರು: ‘ಪರೀಕ್ಷೆ ಮುಗಿಯುವವರೆಗೆ ಮೊಬೈಲ್ ಬದಿಗಿಡಿ. ಓದಿದ್ದನ್ನು ಬರೆದು ಅಭ್ಯಾಸ ಮಾಡಿ. ಊಟ, ನಿದ್ರೆಯನ್ನು ಸಮಯಕ್ಕೆ ಸರಿಯಾಗಿ ಮಾಡಿ, ದಿನಕ್ಕೆ ತಲಾ ಒಂದು ಗಂಟೆಯಂತೆ 3 ವಿಷಯ ಓದಿ, ಚೆನ್ನಾಗಿ ಕೇಳಿಸಿಕೊಂಡವರಿಗೆ ನೆನಪು ಉಳಿಯುತ್ತದೆ. ಭಯವಿಲ್ಲದೆ ಪರೀಕ್ಷೆ ಬರೆಯಿರಿ…’-ಇದು ಪರೀಕ್ಷೆಗೆ ಅಣಿಯಾಗುತ್ತಿರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಶಿಕ್ಷಣ ತಜ್ಞರು ನೀಡಿರುವ ಸಲಹೆ. ವಿಜಯವಾಣಿ, ದಿಗ್ವಿಜಯ ನ್ಯೂಸ್ 24×7 ಹಮ್ಮಿಕೊಂಡಿದ್ದ ಶಿಕ್ಷಣ ಸಂವಾದ ಕಾರ್ಯಕ್ರಮ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವಲ್ಲಿ ಯಶಸ್ವಿಯಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್, ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ಹಾಗೂ ಸ-ಮುದ್ರ ಸಂಸ್ಥೆಯ ಸಂಸ್ಥಾಪಕಿ, ಆಪ್ತ ಸಮಾಲೋಚಕಿ ಭಾರತಿ ಸಿಂಗ್ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳ ಗೊಂದಲ ಬಗೆಹರಿಸಿದರು.

ತೀರಾ ಬದಲಾಗಿಲ್ಲ

ಹೊಸ ಪಠ್ಯಕ್ರಮದಲ್ಲಿ ತೀರಾ ಬದಲಾವಣೆ ಏನೂ ಆಗಿಲ್ಲ. ಮಾದರಿ ಪ್ರಶ್ನೆಪತ್ರಿಕೆ ಹಾಗೂ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾದರಿಯಲ್ಲೇ ಅಂತಿಮ ಪ್ರಶ್ನೆಪತ್ರಿಕೆ ಇರಲಿದೆ.

ಬ್ಲೂಪ್ರಿಂಟ್ ಬೇಕಿಲ್ಲ

ಪ್ರಶ್ನೆಪತ್ರಿಕೆ ರೂಪಿಸಲು ಬ್ಲೂಪ್ರಿಂಟ್ ಸಿದ್ಧಪಡಿಸಲಾಗು ವುದೇ ಹೊರತು ಇತರರ ಅನುಕೂಲಕ್ಕಲ್ಲ. ವಿದ್ಯಾರ್ಥಿಗಳು ಬ್ಲೂಪ್ರಿಂಟ್​ಗಾಗಿ ಕಾಯದೆ ಓದಿನ ಕಡೆ ಗಮನಕೊಡಿ.

| ಡಾ.ಪಿ.ಸಿ.ಜಾಫರ್


ಬ್ಲೂಪ್ರಿಂಟ್​ಗೆ ಕಾಯದೆ ಚೆನ್ನಾಗಿ ಓದಿ

ವರ್ಷವಿಡೀ ಓದಿದ್ದಕ್ಕೆ ಉತ್ತರಿಸಿ ಯಶ ಸಾಧಿಸಬೇಕಾದ ಪರೀಕ್ಷಾ ಕಾಲ ಹತ್ತಿರ ಬರುತ್ತಿದೆ. ಶಿಕ್ಷಣದ ಪ್ರಮುಖ ಘಟ್ಟ ಎಂದೇ ಕರೆಯಲಾಗುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗಾಗಿ ವಿದ್ಯಾರ್ಥಿ ಸಮುದಾಯ ಭರದ ಸಿದ್ಧತೆಯಲ್ಲಿದೆ. ಪರೀಕ್ಷೆಗೆ ಮಾನಸಿಕವಾಗಿ ಸಿದ್ಧಗೊಳ್ಳುವುದರ ಜತೆಗೆ ತಯಾರಿ ಹೇಗಿರಬೇಕು? ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ಉತ್ತರ ಸಿಕ್ಕಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರೂ ಆಗಿರುವ ಡಾ.ಪಿ.ಸಿ.ಜಾಫರ್, ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ಮತ್ತು ಸ-ಮುದ್ರ ಸಂಸ್ಥೆಯ ಸಂಸ್ಥಾಪಕಿ ಹಾಗೂ ಆಪ್ತ ಸಮಾಲೋಚಕಿ ಭಾರತಿ ಸಿಂಗ್ ಪರೀಕ್ಷಾರ್ಥಿಗಳ ಆತಂಕ ನಿವಾರಿಸಿ ಸೂಕ್ತ ಸಲಹೆ ನೀಡಿದ್ದಾರೆ. ಅವುಗಳ ವಿವರ ಇಲ್ಲಿದೆ…

ಬೆಂಗಳೂರು: ಪ್ರಶ್ನೆಪತ್ರಿಕೆಗಳನ್ನು ರೂಪಿಸುವುದಕ್ಕಾಗಿ ಬ್ಲೂಪ್ರಿಂಟ್ ಸಿದ್ಧಪಡಿಸ ಲಾಗುವುದೇ ಹೊರತು ವಿದ್ಯಾರ್ಥಿಗಳು ಅಥವಾ ಶಿಕ್ಷಕರ ಅನುಕೂಲಕ್ಕಲ್ಲ. ವಿದ್ಯಾರ್ಥಿಗಳು ಬ್ಲೂಪ್ರಿಂಟ್​ಗಾಗಿ ಕಾಯುವುದನ್ನು ಬಿಟ್ಟು ಓದಿನ ಕಡೆ ಗಮನಕೊಡಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್ ಸಲಹೆ ನೀಡಿದರು. ಈಗಾಗಲೇ ಮಾದರಿ ಪ್ರಶ್ನೆಪತ್ರಿಕೆ ನೀಡಲಾಗಿದೆ. ಜತೆಗೆ ಪೂರ್ವಸಿದ್ಧತಾ ಪರೀಕ್ಷೆಯನ್ನೂ ನಡೆಸಲಾಗಿದ್ದು, ಇದೇ ಮಾದರಿಯಲ್ಲಿ ಅಂತಿಮ ಪರೀಕ್ಷೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿ ಪರೀಕ್ಷೆಗೆ ಪ್ರಶ್ನೆಪತ್ರಿಕೆ ರಚಿಸುವಾಗ ಬ್ಲೂಪ್ರಿಂಟ್ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿ ಶಿಕ್ಷಣ ಇಲಾಖೆ ವಿಷಯ ತಜ್ಞರೊಂದಿಗೆ ರ್ಚಚಿಸಿ ಒಂದು ಪಾಠದಲ್ಲಿರುವ ವಸ್ತುನಿಷ್ಠ, ಕ್ಲಿಷ್ಟ ಹಾಗೂ ಸಾರಾಂಶ ಎಂಬ ಮೂರು ವಿಭಾಗಗಳನ್ನು ಪಟ್ಟಿ ಮಾಡುತ್ತೇವೆ. ಇದರಿಂದ ಯಾವ ಪ್ರಶ್ನೆಗಳನ್ನು ಎಷ್ಟು ಕೇಳಬೇಕೆಂಬ ಮಾಹಿತಿ ದೊರೆಯಲಿದೆ. ಇದರ ಆಧಾರದ ಮೇಲೆ ಪ್ರಶ್ನೆಪತ್ರಿಕೆ ರಚಿಸಲಾಗುತ್ತದೆ. ಇದು ಸಂಪೂರ್ಣವಾಗಿ ಪ್ರಶ್ನೆಪತ್ರಿಕೆ ರೂಪಿಸುವವರಿಗಾಗಿಯೇ ಹೊರತು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಉಪಯೋಗಕ್ಕಾಗಿ ಅಲ್ಲ ಎಂದು ಎಂದು ಹೇಳಿದರು.

ಟ್ಯೂಷನ್ ಮಾಡುವ ಉಪನ್ಯಾಸಕರು ಅವರ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಗಳಿಸುವಂತೆ ಮಾಡುವ ಉದ್ದೇಶದಿಂದ ಈ ಬ್ಲೂಪ್ರಿಂಟ್ ಮೇಲೆ ಅವಲಂಬಿತರಾಗುತ್ತಾರೆ. ಇತ್ತೀಚೆಗೆ ಕಾಲೇಜೊಂದಕ್ಕೆ ಭೇಟಿ ನೀಡಿ ಪ್ರಶ್ನಿಸಿದಾಗ, ವಿದ್ಯಾರ್ಥಿಯೊಬ್ಬ ‘ಇದು ಬ್ಲೂಪ್ರಿಂಟ್​ನಲ್ಲಿ ಇಲ್ಲ’ ಎಂದುತ್ತರಿಸಿದ. ಇದರಿಂದ ನಾನು ಆಶ್ಚರ್ಯಗೊಂಡೆ. ಹೀಗಾಗಿ ವಿದ್ಯಾರ್ಥಿಗಳು ಲೆಕ್ಕಾಚಾರ ಹಾಕಿ ಓದುವುದು ಬೇಡ. ಪಠ್ಯಕ್ರಮವನ್ನು ಚೆನ್ನಾಗಿ ಓದಿ. ಹಳೇ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬಹುದು ಎಂದರು.

ಆರ್​ಟಿಇ ಅಧಿಸೂಚನೆ

ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಜಾರಿಗೆ ಇಲಾಖೆ ಸಿದ್ಧವಾಗಿದ್ದು, ಸರ್ಕಾರದ ಅಧಿಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ಜಾಫರ್ ಹೇಳಿದರು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಆರ್​ಟಿಇನಲ್ಲಿ ಮೊದಲ ಆದ್ಯತೆ ನೀಡಲು ರಾಜ್ಯ ಸರ್ಕಾರ ತೀರ್ವನಿಸಿದೆ. ಈವರೆಗೆ ಅಧಿಸೂಚನೆ ಹೊರಡಿಸಿಲ್ಲ. ಆದೇಶ ಹೊರಬಿದ್ದ ತಕ್ಷಣ ಅರ್ಜಿ ಆಹ್ವಾನಿಸುತ್ತೇವೆ. ಇದಕ್ಕಾಗಿ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.

ಇಲ್ಲಿ ಪಾಠ ಮಾಡೋಲ್ಲ

ಇಲ್ಲಿ ಪಾಠ ಮಾಡೋಲ್ಲ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆಯನ್ನು ಓದುವುದಕ್ಕೆ ಮತ್ತು ಬರೆಯುವುದಕ್ಕೆ ಬರುವುದಿಲ್ಲ. ಪಾಠ ಮಾಡಿ ಎಂದು ಮುಖ್ಯೋಪಾಧ್ಯಾಯರ ಬಳಿ ಮನವಿ ಮಾಡಿದರೂ ಪ್ರಯೋಜನ ಇಲ್ಲ. ಹೀಗೆಂದು ಗದಗ ಜಿಲ್ಲೆ ಮುಂಡರಗಿ ತಾಲೂಕು ನಾಗರಹಳ್ಳಿ ಗ್ರಾಮದಲ್ಲಿರುವ ಉನ್ನತೀಕರಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಗ್ಗೆ ಎಸ್​ಡಿಎಂಸಿ ಸದಸ್ಯ ಸುರೇಶ್ ಗುಡದಪ್ಪ ಹಲವಾಗಲಿ ಎಂಬುವರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆಯ ಆಯುಕ್ತರು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿರುವುದು ನಮಗೆ ತಿಳಿದಿದೆ. ಹೀಗಾಗಿ ಪರಿಹಾರ ಬೋಧನೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರಿಂದ ಹಿಂದುಳಿದಿರುವ ವಿಷಯಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಲ್ಲದೆ, ಆ ಶಾಲೆಯಿಂದ ವರದಿ ಪಡೆದು ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ವ್ಯವಸ್ಥಿತ ಕಲಿಕೆಗೆ ಇರಲಿ ಆದ್ಯತೆ

ವಿಜ್ಞಾನ, ಗಣಿತ, ಇಂಗ್ಲಿಷ್ ಭಾಷೆ ಕಷ್ಟ ಎಂಬ ಭಾವನೆ ಯಾಕಿದೆ ಎಂದರೆ, ಬಾಲ್ಯದಲ್ಲಿ ಸರಿಯಾದ ಬುನಾದಿ ಸಿಕ್ಕಿಲ್ಲ ಎಂಬುದರ ಸೂಚನೆ ಅದು. ಮೊದಲ ಮೂರು ತರಗತಿಗಳಲ್ಲಿ ಶಿಕ್ಷಕರು ಮಕ್ಕಳಿಗೆ ಭಾಷೆ ಮತ್ತು ಗಣಿತವನ್ನು ಸರಿಯಾಗಿ ಹೇಳಿಕೊಡಬೇಕು. ಇಲ್ಲಿ ಶಿಕ್ಷಕರ ಮಾರ್ಗದರ್ಶನ ಇರುತ್ತದೆ. ನಂತರದ ತರಗತಿಗಳಲ್ಲಿ ಪಠ್ಯ ಪುಸ್ತಕಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಮುಂದುವರಿಯುತ್ತದೆ. ಆಗ ಅಲ್ಲಿ ಅದನ್ನು ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮಕ್ಕಳಿಗೆ ಇರಬೇಕಾಗುತ್ತದೆ. ಹೀಗಾಗಿ ಮೊದಲ ಮೂರು ತರಗತಿಗಳ ಶಿಕ್ಷಣದ ಅವಧಿಯಲ್ಲೇ ಪಾಲಕರು ಕೂಡ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಗಮನಿಸಿ, ಅದನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಬೇಕು. ಹಾಗೆ ಮಾಡಿದಲ್ಲಿ ಈ ರೀತಿ ಕಷ್ಟ ಎಂಬ ಭಾವನೆ ಮೂಡಲಾರದು ಎಂದು ಜಾಫರ್ ಸಲಹೆ ನೀಡಿದರು.

ಅರ್ಥವಾಗದ್ದು ಎಂಬುದು ಇಲ್ಲ

ದಿನವೂ ಓದಿ. ಯೋಗ, ವಾಕಿಂಗ್ ಮಾಡುವುದರಿಂದ ಏಕಾಗ್ರತೆ ಬರುತ್ತದೆ. ಓದಿದ್ದು ನೆನಪಿನಲ್ಲಿರುತ್ತದೆ. ನಿದ್ದೆ ಬರುವಂತಾದರೆ ಹುಳಿ ಮಜ್ಜಿಗೆ ಸೇವಿಸಿ. ಓದಿದ್ದು ಅರ್ಥವಾಗದಿದ್ದರೆ ಉದಾಹರಣೆಯೊಂದಿಗೆ ಅಭ್ಯಾಸ ಮಾಡಿ, ಯಾವುದೂ ಅರ್ಥವಾಗದ ವಿಷಯ ಅಲ್ಲ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಭಾರತಿ ಸಿಂಗ್ ಉತ್ತರ ನೀಡುವ ಮೂಲಕ ಧೈರ್ಯ ತುಂಬಿದರು.

ಆಗಲಿ ಶಿಕ್ಷಕರ ಮೌಲ್ಯಮಾಪನ

ಎಸ್ಸೆಸ್ಸೆಲ್ಸಿ, ಪಿಯು ಎರಡೂ ಪರೀಕ್ಷೆ ನಿಭಾಯಿಸುವುದು ಕಷ್ಟ ಅಲ್ಲವೇ?

ಜಾಫರ್: ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳು ಹತ್ತಿರವಾಗುತ್ತಿವೆೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮುಖ್ಯಮಂತ್ರಿಗಳ ಬಳಿ ಇದ್ದರೂ ತೊಂದರೆಯಾಗಿಲ್ಲ. ತುರ್ತು ವಿಲೇವಾರಿಯಾಗಬೇಕಿರುವ ಕಡತಗಳಿಗೆ ಒಂದೇ ದಿನದಲ್ಲಿ ಒಪ್ಪಿಗೆ ದೊರೆತಿವೆ. 2016ರಲ್ಲಿ ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಎರಡು ಬಾರಿ ಸೋರಿಕೆ ಆಗಿದ್ದರಿಂದ ಸುಸೂತ್ರವಾಗಿ ನಡೆಸಲು ಈಗ ಸಾಕಷ್ಟು ಎಚ್ಚರವಹಿಸಲಾಗುತ್ತಿದೆ. ಪರೀಕ್ಷಾ ಸಮಯದಲ್ಲಿ ನಿರ್ದೇಶಕರಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಹಲವು ಸುತ್ತಿನ ಸಭೆಗಳನ್ನು ನಡೆಸಬೇಕಾಗುತ್ತದೆ. ಹೀಗಾಗಿ ಸ್ವಲ್ಪ ಕಷ್ಟವಾಗಿದೆ.

ಪರೀಕ್ಷೆಗೆ ಏನೆಲ್ಲಾ ಸುರಕ್ಷತಾ ಕ್ರಮಗಳು? ಆನ್​ಲೈನ್ ಪರೀಕ್ಷೆ ಕೈಬಿಟ್ಟಿದ್ದೇಕೆ?

ಜಾಫರ್: ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದರಿಂದ ಖಜಾನೆಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಕರ್ನಾಟಕ ಎಕ್ಸಾಮಿನೇಷನ್ ಸೆಕ್ಯೂರ್ ಸಿಸ್ಟಂ ಪದ್ಧತಿ ಮೂಲಕ ಖಜಾನೆ ಬಾಗಿಲು ತೆರೆಯಲು ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ಅರ್ಹ ಅಧಿಕಾರಿಗಳು ಮಾತ್ರವೇ ಪ್ರಶ್ನೆಪತ್ರಿಕೆ ಹೊರತೆಗೆಯಲು ಸಾಧ್ಯ. ಅಲ್ಲದೆ, ಈ ಪ್ರಕ್ರಿಯೆಯ ವಿಡಿಯೋವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲೇ ಕುಳಿತು ನೋಡಬಹುದಾಗಿದೆ.

ದ್ವಿತೀಯ ಪಿಯು ಪೂರಕ ಪರೀಕ್ಷೆಗಳನ್ನು ಆನ್​ಲೈನ್ ಮೂಲಕವೇ ನಡೆಸಿ ಹೊಸ ಪ್ರಯೋಗ ಮಾಡಲಾಗಿತ್ತು. ಆದರೆ, ಇದನ್ನು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಅನ್ವಯಿಸಲು ಕಷ್ಟವಾಗಿದೆ. ಕಾರಣ, ಪರೀಕ್ಷಾ ಕೇಂದ್ರಗಳಲ್ಲಿನ ವಿದ್ಯುತ್ ವ್ಯತ್ಯಯ, ಮುದ್ರಣ ಯಂತ್ರದ ತೊಂದರೆ, ಹೆಚ್ಚಿನ ಸಮಯದ ಅವಶ್ಯಕತೆ ಇರುವುದರಿಂದ ಇದನ್ನು ಕೈ ಬಿಡಲಾಗಿದೆ.

ಪಿಯು ಮೌಲ್ಯಮಾಪಕರು ಮೌಲ್ಯಮಾಪನ ಬಹಿಷ್ಕರಿಸಿದರೆ ಅದನ್ನು ಹೇಗೆ ನಿಭಾಯಿಸುತ್ತೀರಿ?

ಜಾಫರ್: ಪಿಯು ಉಪನ್ಯಾಸಕರು ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲ್ಲಗೂ ಇದೆ. ಈ ವರ್ಷ ಮೌಲ್ಯಮಾಪನ ಬಹಿಷ್ಕಾರ ನಡೆಯುವುದಿಲ್ಲವೆಂದು ಭಾವಿಸಿದ್ದೇನೆ. ಒಂದು ವೇಳೆ ನಡೆದರೂ ಸೂಕ್ತ ಸಮಯಕ್ಕೆ ಮೌಲ್ಯಮಾಪನ ಮಾಡಿಸುವುದು ಹೇಗೆ ಎಂಬುದು ನನಗೆ ತಿಳಿದಿದೆ. ಅಲ್ಲದೆ, ಪ್ರತಿಭಟನೆ ನಡೆಸುವವರ ವಿರುದ್ಧ ಕಾನೂನಿನ ಕ್ರಮ ಜರುಗಿಸಲೂ ಸಾಧ್ಯವಿದೆ.

ಸರ್ಕಾರಿ ಶಾಲಾ-ಕಾಲೇಜುಗಳ ಮೂಲಸೌಕರ್ಯ ಕೊರತೆ ಯಾವಾಗ ನೀಗಲಿದೆ?

ಜಾಫರ್: ಅನುದಾನದ ಕೊರತೆಯಿಂದಾಗಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು ಕಷ್ಟವಾಗಿದೆ. ರಾಜ್ಯದಲ್ಲಿ 32 ಸಾವಿರ ತರಗತಿಗಳಿಗೆ ದೊಡ್ಡ ಪ್ರಮಾಣದ ರಿಪೇರಿ ಅಗತ್ಯವಿದೆ. ಅಲ್ಲದೆ, ಪಿಯು ವಿಜ್ಞಾನ ವಿಭಾಗದ ಕಾಲೇಜುಗಳಲ್ಲಿ ಸಮರ್ಪಕ ಪ್ರಯೋಗಾಲಯ ಇಲ್ಲ. ಇದೇ ಕಾರಣದಿಂದಾಗಿ ಇಲ್ಲಿ ವಿದ್ಯಾರ್ಥಿಗಳ ಪ್ರಮಾಣ ಕುಸಿದಿದೆ. ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ ನಾವು ಮೂಲಸೌಕರ್ಯ ಕಲ್ಪಿಸುತ್ತೇವೆ.

ಕಡಿಮೆ ಅಂಕ ಬಂದರೆ ಮಕ್ಕಳ ದೂಷಣೆ ಬದಲು ಶಿಕ್ಷಕರ ಮೌಲ್ಯಮಾಪನ ಮಾಡಬೇಕು ಅಲ್ಲವೇ?

ಜಾಫರ್: ಹೌದು. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ಉತ್ತಮ ಅಂಕ ತೆಗೆಯುತ್ತಾರೆ. ಹೀಗಾಗಿ ಶಾಲೆಗೆ ಆಗಮಿಸುವ ಮೊದಲು ಶಿಕ್ಷಕರು ಹೋಂ ವರ್ಕ್ ಮಾಡಿಕೊಂಡು ಬರಬೇಕು. ಅಲ್ಲದೆ, ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡಬೇಕು. ಸರಳವಾಗಿ ಹೇಳಿಕೊಡುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಮಯ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಸುಧಾರಣಾ ಕ್ರಮಗಳಿವೆಯೇ?

ಸುಮಂಗಲಾ: ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ ಮಾಡಿದ್ದೇವೆ. ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಮತ್ತು ಪ್ರಶ್ನೆ ಪತ್ರಿಕೆಯು ಶ್ರೇಣಿಗಳಿಂದ ಕೂಡಿರುವುದರಿಂದ ಕಾಪಿ ಮಾಡುವುದಕ್ಕೆ ಸಾಧ್ಯವಿಲ್ಲ. ಅಂದ ಮಾತ್ರಕ್ಕೆ ಸಂಪೂರ್ಣವಾಗಿ ಕಾಪಿ ಹೊಡೆಯುವುದಕ್ಕೆ ಕಡಿವಾಣ ಹಾಕಿದ್ದೇವೆಂದು ಹೇಳುವುದು ಕಷ್ಟ. ವ್ಯವಸ್ಥಿತವಾಗಿ ಪರೀಕ್ಷಾ ಕೇಂದ್ರದ ಎಲ್ಲ ಅಧಿಕಾರಿಗಳು ಶಾಮೀಲಾಗಿ ಕಾಪಿ ಮಾಡಿದರೆ ಇದನ್ನು ಪತ್ತೆ ಹಚ್ಚುವುದು ಕಷ್ಟ.

ಯುದ್ಧಕಾಲೇ ಶಸ್ತ್ರಾಭ್ಯಾಸ ಬೇಡ..

ಒಂದು ವರ್ಷದ ಸಿಲೆಬಸ್ ಕೊಟ್ಟಿರುವುದನ್ನು ಹಾಗೇ ಉಳಿಸಿಕೊಂಡು ಪರೀಕ್ಷೆ ಹತ್ತಿರ ಬಂದಾಗ ಒಂದೇ ಸಲ ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಎಂಬಂತೆ ಉಸಿರುಕಟ್ಟಿ ಓದಿ ಮುಗಿಸುತ್ತೇವೆ ಎಂದು ಹೊರಟರೆ ಉತ್ತಮ ಫಲಿತಾಂಶ ಸಿಗದು. ಮಿದುಳು ಕೂಡ ಅದಕ್ಕೆ ಸ್ಪಂದಿಸದು. ನಮ್ಮ ಎದುರು ಬೆಟ್ಟದೆತ್ತರದ ಸಮಸ್ಯೆ ಇದ್ದಾಗ ಅದನ್ನು ಪರಿಹರಿಸಲಾಗದೆ ಹಿಂದೆ ಸರಿಯುತ್ತೇವೆ. ಇದರ ಬದಲು ಸಿಲೆಬಸ್ ಸಿಕ್ಕ ಕೂಡಲೇ ಅವುಗಳನ್ನು ವಿಂಗಡಿಸಿ ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತ ಓದಿದರೆ ನೆನಪಿನಲ್ಲಿ ಉಳಿಯುತ್ತದೆ. ಪರೀಕ್ಷೆಯನ್ನೂ ಸಲೀಸಾಗಿ ಎದುರಿಸಬಹುದು ಎಂದು ಸುಮಂಗಲಾ ವಿ. ಹೇಳಿದರು.

ಫೋನ್ ಇನ್​ನಲ್ಲಿ ಕೇಳಲಾದ ಓದುಗರ ಪ್ರಶ್ನೆಗೆ ತಜ್ಞರ ಉತ್ತರ. ವಿಜಯವಾಣಿ ವಿದ್ಯಾರ್ಥಿ ಮಿತ್ರ ನೋಡಿ