ಸಮಸ್ಯಾತ್ಮಕ ಮತಗಟ್ಟೆಗಳ ವರದಿ

ಉಡುಪಿ: ಜಿಲ್ಲೆಯಲ್ಲಿ ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾದ, ಮತದಾರರಿಗೆ ಬೆದರಿಕೆ ಉಂಟು ಮಾಡುವ, ಮತದಾರರು ಬರಲು ಹಿಂಜರಿಯುವ ಮತಗಟ್ಟೆಗಳ ಕುರಿತು ನಾಲ್ಕು ದಿನದಲ್ಲಿ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.

ಇಲ್ಲಿನ ರಜತಾದ್ರಿ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಯಾವುದೇ ಅಡೆತಡೆಗಳಿದ್ದರೆ ಕೂಡಲೇ ಗಮನಕ್ಕೆ ತರುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಮತದಾರರಿಗೆ ಬೆದರಿಕೆ ಉಂಟು ಮಾಡುವ ವಾತಾವರಣ ನಿರ್ಮಿಸುವ ವ್ಯಕ್ತಿಗಳ ಬಗ್ಗೆ, ಕಳೆದ ಬಾರಿ ಅತಿ ಕಡಿಮೆ ಮತದಾನವಾದ ಮತಗಟ್ಟೆಗಳ ಬಳಿ ತೆರಳಿ ಅಲ್ಲಿನ ನೈಜ ಪರಿಸ್ಥಿತಿಯ ವರದಿ ನೀಡಬೇಕು. ಯಾವುದೇ ಮತಗಟ್ಟೆಯಲ್ಲಿ ಒಬ್ಬನೇ ವ್ಯಕ್ತಿಗೆ ಶೇ.75ಕ್ಕಿಂತಲೂ ಹೆಚ್ಚು ಮತದಾನವಾಗಿರುವ ಪ್ರದೇಶದಲ್ಲಿ ಮತದಾರರಿಗೆ ಯಾವುದೇ ಭಯ ಅಥವಾ ಹೆಚ್ಚಿನ ಆಮಿಷ ನೀಡಿರುವಂತಹ ಕುರಿತು ಹಾಗೂ ಮತದಾನ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳ ನಡೆದಿದ್ದರೆ ಅದರ ವರದಿ ನೀಡಬೇಕು. ಸ್ಥಳೀಯ ಬಿ.ಎಲ್.ಒಗಳು, ಸೆಕ್ಟರ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ಫೆ.16ರೊಳಗೆ ವರದಿ ನೀಡುವಂತೆ ಸೂಚಿಸಿದರು.

ಚುನಾವಣೆ ಕರ್ತವ್ಯದಲ್ಲಿ ಪ್ರತಿಯೊಬ್ಬರೂ ತಮಗೆ ವಹಿಸಲಾದ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಲೋಪಗಳಿಗೆ ಆಸ್ಪದ ನೀಡದೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಲೋಕಸಭಾ ಚುನಾವಣೆಗಾಗಿ 92 ಜನ ಸೆಕ್ಟರ್ ಅಧಿಕಾರಿಗಳು ಮತ್ತು 132 ಪೊಲೀಸ್ ಸೆಕ್ಟರ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಎಎಸ್ಪಿ ಕುಮಾರಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ ಹಾಗೂ ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.