ದೇವದುರ್ಗ: ಲೂಕಿನ ದೇವತಗಲ್ ಗ್ರಾಮದಲ್ಲಿ 30ವರ್ಷಗಳ ಹಿಂದೆ ಹಾಕಲಾದ ವಿದ್ಯುತ್ ಕಂಬ, ವೈಯರ್‌ಗಳನ್ನು ತೆರವುಗೊಳಿಸಿ ಹೊಸಕಂಬ, ವೈಯರ್ ಜೋಡಣೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ವೆಂಕಟೇಶ ಚಿಲ್ಕರಾಗಿಗೆ ನಮ್ಮ ಕರ್ನಾಟಕ ಸೇನೆ ಮಂಗಳವಾರ ಮನವಿ ಸಲ್ಲಿಸಿತು.
ದೇವತಗಲ್ ಗ್ರಾಮ ಅತ್ಯಂತ ಹಿಂದುಳಿದಿದ್ದು ಸೌಲಭ್ಯಗಳಿಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಕಂಬ, ವೈಯರ್‌ಗಳು ಹಾಳಾಗಿದ್ದು ಅಪಾಯಕ್ಕೆ ಆಹ್ವಾನಿಸುತ್ತಿವೆ. ವಿದ್ಯುತ್ ಕಂಬಗಳು ಬಾಗಿದ್ದು ವೈಯರ್‌ಗಳು ಕೈಗೆಟುವಂತೆ ಜೋತುಬಿದ್ದಿವೆ. ಇನ್ನು ಕೆಲಕಡೆ ಮನೆಗಳ ಮೇಲೆ ಹಾಯ್ದುಹೋದ ವೈಯರ್ ಬಿಸಿಲಿನ ಶಾಖಕ್ಕೆ ಜೋತುಬಿದ್ದು ಮನೆಗೆ ತಾಕಿವೆ. ಮಳೆಗಾಲ ಸೇರಿ ಕೆಲ ಸಂದರ್ಭದಲ್ಲಿ ಮನೆಗೆ ಅರ್ತಿಂಗ್ ಬರುತ್ತಿದೆ.
ಕೂಡಲೇ ಗ್ರಾಮಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಬೇಕು. ಹಾಳಾದ ಕಂಬಗಳನ್ನು ತೆರುವುಗೊಳಿಸಿ, ಹೊಸಕಂಬ ಹಾಕಿ ಗುಣಮಟ್ಟದ ವೈರ್ ಜೋಡಣೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಜೆಸ್ಕಾಂ ಕಚೇರಿ ಮುಂದೆ ಗ್ರಾಮಸ್ಥರ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರಮುಖರಾದ ದೇವೀಂದ್ರಪ್ಪ ತಾತ ಗಲಗ, ಚನ್ನಬಸವ ಕಡಮಲ್ ಇತರರಿದ್ದರು.