ಮಾಯಕೊಂಡ: ಸಾಸ್ವೆಹಳ್ಳಿ ಏತ ನೀರಾವರಿ ಕೆರೆ ನೀರು ತುಂಬಿಸುವ ಪೈಪ್ಲೈನ್ ಕಳಪೆಯಾಗಿದೆ ಎಂದು ರೈತರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಮಾಯಕೊಂಡ ಗ್ರಾಮದ ಹೊರವಲಯದ ಹಳ್ಳದ ಸಮೀಪ ಹಾದುಹೋಗಿರುವ ಮುಖ್ಯ ಪೈಪ್ ಲೈನ್ ಒಡೆದು ವಾರದಿಂದ ನೀರು ಹಳ್ಳದ ಪಾಲಾಗುತ್ತಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಮನಹರಿಸುತ್ತಿಲ್ಲ ಎಂದು ಹಳ್ಳದ ಬಳಿ ತೆರಳಿ, ಅಲ್ಲಿನ ಅವ್ಯವಸ್ಥೆಯ ವಿರುದ್ಧ ಗುಡುಗಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡ್ರ ಅಶೋಕ್ ಮಾತನಾಡಿ, 450 ಕೋಟಿಗಿಂತ ಅಧಿಕ ಮೊತ್ತದ ಅನುದಾನದಲ್ಲಿ ಕಾಮಗಾರಿ ಮಾಡಿದ್ದರೂ, ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಿಂದ ಸಾಸಲು ಹಳ್ಳ ಮಾಯಕೊಂಡ ಮಾರ್ಗವಾಗಿ ಬಂದಿರುವ ಮುಖ್ಯ ಪೈಪ್ ಲೈನ್ ಹಲವು ಕಡೆ ಒಡೆದು ನೀರು ಹಳ್ಳದ ಪಾಲಾಗುತ್ತಿದೆ ಎಂದರು.
ಮುಖಂಡ ರಾಮಜೋಗಿ ಪ್ರತಾಪ್ ಮಾತನಾಡಿ, ಮಾಯಕೊಂಡ, ದೊಡ್ಡ ಮಾಗಡಿ, ದಿಂಡದಹಳ್ಳಿಗಳ ಕೆರೆಗಳಿಗೆ ಹರಿಯುವ ನೀರು ಸಂಪೂರ್ಣ ಹಳ್ಳಕ್ಕೆ ಹರಿಯುತ್ತಿದೆ. ರಾಜನಹಳ್ಳಿ ಬಳಿಯ 22 ಕೆರೆಗಳಿಗೆ ಕಳಪೆ ಪೈಪ್ಲೈನ್ ಅಳವಡಿಕೆಯಿಂದ ಸಮರ್ಪಕವಾಗಿ ತುಂಬುತ್ತಿಲ್ಲ ಎಂದರು.
ಶಾಸಕರು ಕೂಡಲೇ ಸಂಬಂಧಿಸಿದ ಇಂಜಿನಿಯರ್ಗಳಿಗೆ ಸೂಚನೆ ನೀಡಿ ಕೆರೆಗಳಿಗೆ ನೀರು ಸಮರ್ಪಕವಾಗಿ ಪೂರೈಕೆ ಆಗುವಂತೆ ಮಾಡಬೇಕು ಎಂದು ಕೋರಿದರು.
ಬಿ.ಟಿ. ಪ್ರಭು, ಕೊಡಗಳ್ಳಿ ಷಣ್ಮುಖಪ್ಪ, ನಾಗರಾಜ್ ಕೊಂಗಪ್ಪರ, ಶಿವಣ್ಣ ಕೂನಪ್ಪರ, ರಾಮಣ್ಣ, ಬಳ್ಳಾಪುರ ಚಂದ್ರಪ್ಪ, ಮಾದಾಪುರ ಜಯಪ್ಪ, ಹನುಮಂತಪ್ಪ ಪ್ರತಾಪ್ ಇದ್ದರು.