ಕನ್ನಡ ಭವನ ದುರಸ್ತಿ ಮಾಡಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕನ್ನಡ ಭವನ ಹಾಗೂ ಸಾಂಸ್ಕೃತಿಕ ಭವನಗಳನ್ನು 15 ದಿನಗಳಲ್ಲಿ ದುರಸ್ತಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.

ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡಿರುವ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್​ನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಲೆಗಳ ಪ್ರದರ್ಶನ ಹಾಗೂ ಪ್ರೋತ್ಸಾಹಕ್ಕೆ ಮೀಸಲಿರುವ ಇಂತಹ ಭವನಗಳ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ನವೀಕೃತ ಕಟ್ಟಡದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಟ್ರಸ್ಟ್​ಗೆ ವಹಿಸಬೇಕು. ನವೀಕೃತ ಕಟ್ಟಡದಲ್ಲಿನ ಪ್ರತಿಧ್ವನಿ ದೋಷವನ್ನು ಕಲಾವಿದರ ಸಲಹೆ ಪಡೆದು ಸರಿಪಡಿಸಬೇಕು ಎಂದು ತಿಳಿಸಿದರು.

ಸಂಸದ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು. ಸಚಿವ ಸಿ.ಎಸ್. ಶಿವಳ್ಳಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಉಪ ಮಹಾಪೌರರಾದ ಮೇನಕಾ ಹುರಳಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಲಕ್ಷ್ಮೀ ಉಪ್ಪಾರ, ಡಾ. ಪಾಂಡುರಂಗ ಪಾಟೀಲ, ಗಣೇಶ ಟಗರಗುಂಟಿ, ಪ್ರಕಾಶ ಕ್ಯಾರಕಟ್ಟಿ, ರಾಜಣ್ಣ ಕೊರವಿ, ಮಾಜಿ ಮಹಾಪೌರ ಅನಿಲ ಪಾಟೀಲ, ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ, ಮಲ್ಲಿಕಾರ್ಜುನ ಸಾವುಕಾರ, ಅಲ್ತಾಫ್ ಹಳ್ಳೂರ, ಜಿಲ್ಲಾಧಿಕಾರಿ ದೀಪಾ ಚೋಳನ್ ಮತ್ತಿತರರಿದ್ದರು.

ಧ್ವನಿವರ್ಧಕ ಅವ್ಯವಸ್ಥೆ: ನವೀಕೃತಗೊಂಡ ಸವಾಯಿ ಗಂಧರ್ವ ಹಾಲ್​ನಲ್ಲಿನ ಧ್ವನಿವರ್ಧಕ ವ್ಯವಸ್ಥೆ ಸರಿ ಇಲ್ಲದಿರುವುದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಇರಿಸುಮುರುಸು ಉಂಟು ಮಾಡಿತು. ಧ್ವನಿವರ್ಧಕದಲ್ಲಿನ ಮಾತು ಪ್ರತಿಧ್ವನಿಸಿದ್ದರಿಂದ ಸಚಿವರು ಹಾಗೂ ಶಾಸಕರು ಏನು ಮಾತನಾಡುತ್ತಿದ್ದಾರೆಂಬುದು ಸ್ಪಷ್ಟವಾಗಿ ಕೇಳಿಸದಂತಾಯಿತು.