ರೇಣುಕಾಚಾರ್ಯ ಮಹಿಳಾ ಸಹಕಾರಿ ಸಂಘದ ನಾಲ್ವರ ಬಂಧನಕ್ಕೆ ಆದೇಶ

ಬೆಳಗಾವಿ: ಗ್ರಾಹಕರಿಗೆ ಠೇವಣಿ ಹಣ ಹಿಂದಿರುಗಿಸದ ಗೋಕಾಕದ ಜಗದ್ಗುರು ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಾಲ್ವರು ಪದಾಧಿಕಾರಿಗಳನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಸೂಚನೆ ನೀಡಿ ಅರೆಸ್ಟ್ ವಾರೆಂಟ್ ಹೊರಡಿಸಿದೆ.

ಅಪರಾಧಿಗಳಾದ ಸಂಘದ ಅಧ್ಯಕ್ಷೆ ಶಿವಲೀಲಾ ಹಿರೇಮಠ, ಕಾರ್ಯದರ್ಶಿ ಚನ್ನಪ್ಪರಾಯ ಯೋಗಿಕೊಳ್ಳಮಠ, ಉಪಾಧ್ಯಕ್ಷೆ ಸುಮಂಗಲಾ ಹಿರೇಮಠ ಹಾಗೂ ಆಡಳಿತ ಮಂಡಳಿ ನಿರ್ದೇಶಕಿ ಶಾಂತಾದೇವಿ ಕಂಬಿ ಅವರನ್ನು ಏಪ್ರಿಲ್ 24 ರೊಳಗಾಗಿ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದ ನ್ಯಾಯಾಲಯಕ್ಕೆ ಪೊಲೀಸರು ಅವರನ್ನು ಹಾಜರುಪಡಿಸಿರಲಿಲ್ಲ. ಇದೀಗ ಮತ್ತೆ ಜೂನ್.25 ರೊಳಗಾಗಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಿದೆ.

ಜಗದ್ಗುರು ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸಂಘದಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಮರುಪಾವತಿಸಿರಲಿಲ್ಲ. ಅದನ್ನು ಪ್ರಶ್ನಿಸಿ ಗ್ರಾಹಕ ಮಹಾಂತೇಶ ಬೆನ್ನೂರ 2018ರ ಫೆಬ್ರವರಿಯಲ್ಲಿ ಸಂಘದ ವಿರುದ್ಧ ದಾಖಲಿಸಿದ ದೂರಿನ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ 2018ರ ಸೆಪ್ಟೆಂಬರ್ 26ರಂದು ತೀರ್ಪು ಪ್ರಕಟಿಸಿ ಗ್ರಾಹಕರಿಗೆ ಬಡ್ಡಿ ಸಹಿತ ಹಣ ಮರು ಪಾವತಿಸುವಂತೆ ಆದೇಶಿಸಿತ್ತು. ಆದರೂ ಮರುಪಾವತಿಸದ ಸಂಘದ ವಿರುದ್ಧ ಗ್ರಾಹಕರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಾಲ್ವರು ಬಂಧಿಸಿದೆ. ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *