ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದ ರೇಣುಕಾ ಸಕ್ಕರೆ ಕಾರ್ಖಾನೆಯು ಕಬ್ಬು ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂದು ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಬೆಳಗಾವಿ ಕಾನೂನು ಅಳತೆ ಮತ್ತು ತೂಕಮಾಪನ ಶಾಸ್ತ್ರ ಇಲಾಖೆಯ ಎಸಿಎಲ್‌ಎಂ ಅಮರೇಶ ಪಾನಿಶೆಟ್ಟರ ನೇತೃತ್ವದ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಾರ್ಖಾನೆಯ ತೂಕದ ಸೇತುವೆಯಲ್ಲಿ ಯಾವುದೇ ದೋಷಗಳು ಕಂಡು ಬರದ ಹಿನ್ನೆಲೆಯಲ್ಲಿ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದ ಝುಂಜರವಾಡ ಗ್ರಾಮದ ಟ್ರ್ಯಾಕ್ಟರ್ ಚಾಲಕ ಜಾಪರಸಾಬ್ ಪಿಂಜಾರ್ ಹಾಗೂ ಸುಟ್ಟಟ್ಟಿ ಗ್ರಾಮದ ಸಿದರಾಯ ನಾಯಿಕ ಅವರನ್ನು ವಿಚಾರಿಸಿದರು. ನಮ್ಮ ಟ್ರ್ಯಾಕ್ಟರ್‌ನ್ನು ಸರತಿ ಸಾಲಲ್ಲಿ ನಿಲ್ಲಿಸದೇ ನೇರವಾಗಿ ಬಿಡುವಂತೆ ಕಾರ್ಖಾನೆ ಅಧಿಕಾರಿಗಳಿಗೆ ವಿನಂತಿಸಿದರೂ, ಅವರು ಬಿಡದಿರುವ ಹಿನ್ನೆಲೆಯಲ್ಲಿ ಈ ರೀತಿ ವಿಡಿಯೋ ಮಾಡಿದ್ದೇವೆ ಎಂದು ಒಪ್ಪಿಕೊಂಡರು. ತೂಕದಲ್ಲಿ ಯಾವುದೇ ಮೋಸವಿಲ್ಲವೆಂದು ತಿಳಿಸಿ ಅಧಿಕಾರಿಗಳಿಗೆ ಲಿಖಿತ ಪತ್ರ ನೀಡಿದರು.
ಸಕ್ಕರೆ ಕಾರ್ಖಾನೆಯ ಜಿ.ಎಂ ಸಂಜೀವ ತೇರದಾಳ ಮಾತನಾಡಿ, ಕಬ್ಬು ಬೆಳೆಗಾರರು ಯಾವುದೇ ವದಂತಿಗೆ ಕಿವಿಗೊಡದೇ ಕಾರ್ಖಾನೆಗೆ ಕಬ್ಬು ಕಳುಹಿಸಿಕೋಡಬೇಕೆಂದು ತಿಳಿಸಿದರು. ಚಿಕ್ಕೋಡಿ ಕಾನೂನು ಅಳತೆ ಮತ್ತು ತೂಕಮಾಪನ ಶಾಸ್ತ್ರ ಇಲಾಖೆಯ ಎಸಿಎಲ್‌ಎಂ ಕೆ.ಜಿ ಕುಲಕರ್ಣಿ, ಕಾರ್ಖಾನೆ ಮುಖ್ಯ ವ್ಯವಸ್ಥಾಪಕ ರಾಜಕುಮಾರ ಅಡಹಳ್ಳಿ, ಮಹಾಂತೇಶ ಚಿಪ್ಪಾಡಿ, ಸಿದ್ದಪ್ಪ ತೇಲಿ ಇತರರು ಇದ್ದರು.