ಎಲ್ಲ ಮಹಿಳೆಯರಿಗೂ #MeToo ಕಥೆ ಇದ್ದೇ ಇರುತ್ತೆ: ರೇಣುಕಾ ಶಹಾನೆ

ಮುಂಬೈ: ದೇಶದಲ್ಲಿ ಕೇಳಯರಿದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣಗಳು ಬಹಳಷ್ಟು ಅಡಗಿವೆ ಎಂದು ಬಾಲಿವುಡ್​ ನಟಿ ರೇಣುಕಾ ಶಹಾನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

#MeToo ಆಂದೋಲನದ ಕುರಿತು ಮಾತನಾಡಿರುವ ಹಿರಿಯ ನಟಿ ರೇಣುಕಾ, “ಮೀಟೂ ಕಥೆಯಿರದ ಹೆಣ್ಣು ಮಕ್ಕಳು ಇದ್ದಾರೆ ಎಂಬುದನ್ನು ನಾನು ನಂಬುವುದಿಲ್ಲ. ನನ್ನೊಳಗೂ ಮೀಟೂ ಕಥೆಯಿದೆ. ಆದರೆ ನನ್ನ ಕಥೆ ಯಾವುದೇ ಪ್ರಸಿದ್ಧ ವ್ಯಕ್ತಿಯನ್ನು ಒಳಗೊಂಡಿಲ್ಲ. ಬಹಳ ಹಿಂದೆ ನನ್ನ ಜೀವನದಲ್ಲಿ ಈ ಘಟನೆ ನಡೆದಿತ್ತು. ಅದು ದೀರ್ಘ ಕಾಲದವರೆಗೂ ನನ್ನನ್ನು ಕಾಡಿತ್ತು. ಈ ಘಟನೆಯು ನಾನು ಕೆಲ ಸನ್ನಿವೇಶಗಳನ್ನು ನೋಡುವ ರೀತಿಯನ್ನೇ ಬದಲಿಸಿದೆ” ಎಂದು ಹೇಳಿಕೊಂಡಿದ್ದಾರೆ.

ನನ್ನ ಜೀವನದ ಹೆಚ್ಚಿನ ಸಮಯವನ್ನು ಸ್ಥಳೀಯ ಬಸ್​ ಮತ್ತು ರೈಲಿನ ಪ್ರಯಾಣದಲ್ಲೇ ಕಳೆದಿದ್ದೇನೆ. ಈ ವೇಳೆ ಹಲವು ರೀತಿಯ ಲೈಂಗಿಕ ಕಿರುಕುಳವನ್ನು ಎದುರಿಸುವುದು ನಿಮಗೆಲ್ಲ ತಿಳಿದೇ ಇದೆ. ಇಂಥ ಕಿರುಕುಳಕ್ಕೆ ಅಪ್ರಾಪ್ತೆ, ಗರ್ಭಿಣಿ, ಗೃಹಿಣಿ ಎಂಬ ಯಾವುದೇ ವಿಷಯಗಳು ಅಡ್ಡಿ ಬರುವುದಿಲ್ಲ. ಇಂಥ ಲೈಂಗಿಕ ದೌರ್ಜನ್ಯಗಳ ಪಟ್ಟಿಗೆ ಕೊನೆಯಿಲ್ಲ ಎಂದಿದ್ದಾರೆ.

ಪ್ರಮುಖ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಅಭಿಪ್ರಾಯ ಮಂಡಿಸುವ ರೇಣುಕಾ ಅವರನ್ನು ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸುವ ಕಮಿಟಿಗೆ ಸದಸ್ಯರಾಗಿ ನೇಮಕಗೊಳಿಸಲಾಗಿದೆ. (ಏಜೆನ್ಸೀಸ್)