ಬೊಬ್ಬರ್ಯ ಕೆರೆಗೆ ಬೇಕು ಕಾಯಕಲ್ಪ

ಶಿರ್ವ: ಸುಮಾರು 3-4 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬೊಬ್ಬರ್ಯ ಕೆರೆಯನ್ನು (ಕೆಳಗಿನ ಕೆರೆ) ಅಭಿವೃದ್ಧಿಪಡಿಸಿ ನೀರಿನ ಆಶ್ರಯ ಮತ್ತು ವಿಹಾರ ತಾಣವಾಗಿ ಅಭಿವೃದ್ಧಿಪಡಿಸಿದ್ದಲ್ಲಿ ಇಂದು ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ನಿಂದ ತುಂಬಿರುವ ಕೆರೆ ಮತ್ತೆ ಜನೋಪಯೋಗಿಯಾಗಲಿದೆ.

ಹೂಳು ತುಂಬಿ ಮತ್ತು ಪ್ರಖರ ಬಿಸಿಲಿನ ಪರಿಣಾಮ ಈ ಕೆರೆಯಲ್ಲಿ ನೀರು ಬತ್ತುವ ಹಂತಕ್ಕೆ ಬಂದು ತಲುಪಿದೆ. ಹಿಂದೆ ಸುತ್ತಮುತ್ತಲಿನ ಪ್ರದೇಶದ ಕೃಷಿಗೆ ನೀರುಣಿಸುತ್ತಿದ್ದ ಈ ಕೆರೆಯ ನೀರನ್ನು ಪ್ರಸ್ತುತ ಬಳಕೆ ಮಾಡುತತಿಲ್ಲ. ಸಂಪೂರ್ಣ ಹೂಳೆತ್ತಿ ಶುಚಿ ಮಾಡಿದಲ್ಲಿ ಕೆರೆ ಉತ್ತಮ ಜಲಾಶಯವಾಗುವುದರಲ್ಲಿ ಸಂಶಯವಿಲ್ಲ.

ಸ್ವಚ್ಛತೆ ಮರೀಚಿಕೆ: ಈ ಪ್ರದೇಶದಲ್ಲಿ ಬಾರ್, ವೈನ್‌ಶಾಪ್‌ಗಳು ಇರುವುದರಿಂದ ಕೆಲವು ಕಿಡಿಗೇಡಿಗಳು ಮದ್ಯದ ಬಾಟಲಿಗಳನ್ನು ಕೆರೆಗೆ ಎಸೆದು ವಿಘ್ನಸಂತೋಷ ಅನುಭವಿಸಿದರೆ, ಮತ್ತೆ ಕೆಲವರು ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಕಸ ತುಂಬಿಸಿ ಕೆರೆಗೆ ಹಾಗೂ ಸುತ್ತಲಿನ ಪ್ರದೇಶಕ್ಕೆ ಎಸೆಯುತ್ತಿದ್ದಾರೆ. ಇದರಿಂದ ಈ ಪರಿಸರದಲ್ಲಿ ಸ್ವಚ್ಛತೆ ಮರೀಚಿಕೆಯಾಗುತ್ತಿದೆ.
ಕೆರೆಯ ಸುತ್ತ ಪೊದೆಗಳು ಬೆಳೆದಿದ್ದು ಅವುಗಳನ್ನು ತೆಗೆದು ವಾಕಿಂಗ್ ಟ್ರ್ಯಾಕ್, ಹೂದೋಟ ಮಾಡಿದಲ್ಲಿ ಕೆರೆಯ ಪರಿಸರ ವಿಹಾರದ ಸ್ಥಳವಾಗಿ ಮಾರ್ಪಡಿಸಬಹುದು. ಕೆರೆಯ ಹೂಳೆತ್ತಿದ್ದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುವುದರಿಂದ ಬೋಟಿಂಗ್ ವ್ಯವಸ್ಥೆಯನ್ನೂ ಮಾಡಬಹುದು.

ಗ್ರಾಮ ಪಂಚಾಯಿತಿ ಪ್ರಯತ್ನ: ಈ ಹಿಂದೆ ಕೆರೆ ದಂಡೆಯಲ್ಲಿ ಇಂಟರ್‌ಲಾಕ್ ಹಾಕಿ ವಾಕಿಂಗ್ ಟ್ರ್ಯಾಕ್ ನಿರ್ಮಿಸುವ ಪ್ರಯತ್ನ ಗ್ರಾಪಂನಿಂದ ಮಾಡಲಾಗಿತ್ತು. ಆದರೆ ಅನುದಾನದ ಕೊರತೆಯಿಂದ ಇಂಟರ್‌ಲಾಕ್‌ಗಳನ್ನು ಪೂರ್ಣವಾಗಿ ಅಳವಡಿಸಲು ಸಾಧ್ಯವಾಗಿರಲಿಲ್ಲ. ಈ ಕಾರ‌್ಯ ಕೇವಲ ಗ್ರಾಪಂ ಅನುದಾನವನ್ನು ಮಾತ್ರ ಅವಲಂಬಿಸಿದೆ. ಶಾಸಕರು, ಸಂಸದರು ಮತ್ತು ಸರ್ಕಾರದ ಇತರ ಅನುದಾನಗಳನ್ನು ಪಡೆದುಕೊಂಡರೆ ಮಾತ್ರ ಪೂರ್ಣವಾಗಿ ಈ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಮುಂದಾಳತ್ವ ವಹಿಸುವ ಇಚ್ಛಾಶಕ್ತಿ ಹೊಂದಿರುವವರ ಅಗತ್ಯವಿದೆ.

ಕಸದ ಕೊಂಪೆಯಾದೀತು!: ಸದ್ಯ ಮೇಲಿನ ಕೆರೆ ಮತ್ತು ಕೆಳಗಿನ ಕೆರೆ ಪರಿಸರದಲ್ಲಿ ಬೇಕಾಬಿಟ್ಟಿ ಕಸ ಎಸೆದು ಹೋಗಲಾಗುತ್ತಿದೆ. ಧಾರ್ಮಿಕ ಹಿನ್ನೆಲೆಯ ಸ್ಥಳವಾಗಿದ್ದರೂ ಜನ ಈ ರೀತಿ ಮಾಡುತ್ತಿರುವುದು ವಿಪರ್ಯಾಸ. ಈ ಬಗ್ಗೆ ಸ್ಥಳೀಯಾಡಳಿತ ಕಠಿಣ ಕ್ರಮ ಕೈಗೊಳ್ಳದಿದ್ದರೆ ಕೆರೆ ಕಸದ ಕೊಂಪೆಯಾದೀತು.

ಬೊಬ್ಬರ್ಯ ಕೆರೆ ಪರಿಸರ ಶುಚಿಗೊಳಿಸಲು ಶ್ರಮದಾನ ಮಾಡಲಾಗುತ್ತಿದೆ. ನಾವು ಸ್ವಚ್ಛತೆ ಮಾಡಿದ ಹಾಗೆಯೇ ಕಸ ಎಸೆದು ಹೋಗುವವರಿದ್ದರೆ ನಮ್ಮ ಶ್ರಮ ನಿಷ್ಪ್ರಯೋಜಕ. ಕೆರೆ ಅಭಿವೃದ್ಧಿಗೆ ಹಾಗೂ ಇದನ್ನು ವಿಹಾರ ತಾಣವಾಗಿ ರೂಪುಗೊಳಿಸುವಲ್ಲಿ ವ್ಯವಸ್ಥಿತ ಯೋಜನೆ ಅಗತ್ಯವಿದೆ.
ಸಂತೋಷ್ ಕುಮಾರ್ ಮೂಡುಬೆಳ್ಳೆ ವಕೀಲರು

ಬೊಬ್ಬರ್ಯ ಕೆರೆ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿ ಕಸ ಹಾಕುವುದನ್ನು ನಿರ್ಬಂಧಿಸಿ ಗ್ರಾಪಂ ಪ್ರಕಟಣೆ ಹೊರಡಿಸಿದೆ. ಕಸ ಎಸೆಯುವವರ ವಿರುದ್ಧ ಪರಿಸರ ಸಂರಕ್ಷಣೆ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸಲಾಗುವುದು.
ಸುಧಾಕರ ಪೂಜಾರಿ ವಾರ್ಡ್ ಸದಸ್ಯ

Leave a Reply

Your email address will not be published. Required fields are marked *