ಚಾಪೆಲ್ ನವೀಕರಣ ಸಂಸ್ಕೃತಿಗೆ ಮರುಜೀವ

ಮಂಗಳೂರು: ಅಲೋಶಿಯಸ್ ಚಾಪೆಲ್ ನವೀಕೃತಗೊಂಡಿರುವುದರಿಂದ ಸಂಸ್ಕೃತಿಯು ಮರುಜೀವ ಪಡೆದಂತಾಗಿದೆ. ಕಲೆಯ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಶಿವಮೊಗ್ಗ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಹೇಳಿದರು.

ಸಂತ ಅಲೋಶಿಯಸ್ ಚಾಪೆಲ್‌ನ ನವೀಕೃತ ವರ್ಣಚಿತ್ರ ಮತ್ತು ವಸ್ತು ಸಂಗ್ರಹಾಲಯ ಉದ್ಘಾಟಿಸಿ ಮಾತನಾಡಿದರು.

ಚಾಪೆಲ್ ಪೇಂಟಿಂಗ್‌ನ ನವೀಕೃತ ಲಕ ಉದ್ಘಾಟಿಸಿ, ದಿಲ್ಲಿಯ ಇಂಟ್ಯಾಕ್‌ನ ಪ್ರಿನ್ಸಿಪಾಲ್ ಡೈರೆಕ್ಟರ್ ನೀಲಬ್ ಸಿನ್ಹಾ, ಚಿತ್ರವನ್ನು ಪ್ರೋತ್ಸಾಹಿಸುವ ಮನಸ್ಸುಗಳಿಂದ ಕಲಾವಿದ ಹಾಗೂ ಕಲೆ ಜೀವಂತವಾಗಿ ಉಳಿಯಬಹುದು. ಚಾಪೆಲ್‌ನ ನವೀಕರಣ ಸವಾಲಿನ ಜತೆಗೆ ಖುಷಿ ಕೊಡುವ ಸಂಗತಿಯಾಗಿತ್ತು. ಪ್ರತಿ ಫ್ರೇಮ್ ಅಧ್ಯಯನ ಬಳಿಕ ನಮ್ಮ ತಂಡಸೂಕ್ಷ್ಮವಾಗಿ ಕೆಲಸ ಮಾಡಿದೆ. ಈ ಪೇಟಿಂಗ್ 50ರಿಂದ 60ರವರೆಗೆ ಬಾಳುತ್ತದೆ. 25 ವರ್ಷಗಳ ನಂತರ ತಂಡ ಮತ್ತೊಂದು ಸಲ ಪರಿಶೀಲನೆ ನಡೆಸಲಿದೆ. ಬಣ್ಣಗಾರಿಕೆಯಲ್ಲಿ ಯಾವುದೇ ರೀತಿಯ ಕೆಮಿಕಲ್ ಬಳಸಿಲ್ಲ ಎಂದರು.

ವರ್ಣಚಿತ್ರಕಾರ ಅಂತೋನಿಯೊ ಮೊಸ್ಕೇನಿ ಅವರ ಹಿರಿಯ ಸೋದರ ಸಂಬಂಧಿ ಇಟಲಿಯ ಸಿಲ್ವನಾ ರಿಝ್ಝಿ, ಕಾಲೇಜಿನ ರೆಕ್ಟರ್ ಡೈನೇಶಿಯಸ್ ವಾಸ್, ಮಾಜಿ ರೆಕ್ಟರ್ ಲಿಯೊ ಡಿಸೋಜ, ಪ್ರದೀಪ್, ಪ್ರಶಾಂತ್ ಮಾಡ್ತಾ, ಕ್ರಿಸ್ಟೋಫರ್ ಉಪಸ್ಥಿತರಿದ್ದರು.

1.50 ಕೋಟಿ ರೂ.ವೆಚ್ಚದಲ್ಲಿ ನವೀಕರಣ: 120 ವರ್ಷಗಳ ಹಿಂದಿನ ಸಂತ ಅಲೋಶಿಯಸ್ ಕಾಲೇಜಿನ ವಿಶ್ವದರ್ಜೆಯ ವರ್ಣಚಿತ್ರಗಳನ್ನು 2ನೇ ಬಾರಿಗೆ 1.50 ಕೋಟಿ ರೂ. ವೆಚ್ಚದಲ್ಲಿ ಪುನಃ ನವೀಕರಿಸಲಾಗಿದೆ. ಒಟ್ಟು 829 ಚದರ ಮೀಟರ್ ವಿಸ್ತೀರ್ಣವಿರುವ ಸಂತ ಅಲೋಶಿಯಸ್ ಕಾಲೇಜಿನ ಕಿರು ಇಗರ್ಜಿಯ ಗೋಡೆಗಳ ಮೇಲೆ ಇಟಲಿಯ ಹೆಸರಾಂತ ಕಲಾವಿದ ಅಂತೋನಿಯೊ ಮೊಸ್ಕೇನಿ ತಮ್ಮ ಕಲಾ ಕೌಶಲದಿಂದ ಈ ಅಪೂರ್ವ ಚಿತ್ರಗಳನ್ನು ಬಿಡಿಸಿದ್ದರು.

ಮ್ಯೂಸಿಯಂನಲ್ಲಿ ಮಂಗಳೂರಿನ ಮೊದಲ ಕಾರು: 55ಅಲೋಶಿಯಸ್ ಕಾಲೇಜಿನ ನವೀಕೃತ ಮ್ಯೂಸಿಯಂನಲ್ಲಿ ಮಂಗಳೂರಿಗೆ ಬಂದ ಮೊದಲ ಕಾರಿನಿಂದ ಆರಂಭಿಸಿ ವಿವಿಧ ನಾಣ್ಯಗಳು, ಪುರಾತನ ವಸ್ತುಗಳು, ಮೊದಲ ಕಂಪ್ಯೂಟರ್, ಆಫ್ರಿಕಾದ ಕಲಾಕೃತಿಗಳಿವೆ. ನವ ಶಿಲಾಯುಗದ ಕಲ್ಲಿನಿಂದ ಮಾಡಿದ ಕೊಡಲಿ, ಬರ್ಲಿನ್ ಗೋಡೆಯ ತುಣುಕುಗಳು ಸೇರಿದಂತೆ ಅನೇಕ ವಸ್ತುಗಳನ್ನು ಇಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. 1880ರಲ್ಲಿ ಅಲೋಶಿಯಸ್ ಕಾಲೇಜು ಆರಂಭಗೊಂಡ ವರ್ಷದಲ್ಲಿ ವಿದ್ಯಾರ್ಥಿಗಳು ಉಪಯೋಗಿಸಿದ್ದ, ಕೊರೆದ-ಗೀಚು ತುಂಬಿದ ಡೆಸ್ಕ್‌ನ್ನೂ ಪ್ರದರ್ಶನಕ್ಕೆ ಇಡಲಾಗಿದೆ. ಇಟಲಿಯ ಜೆಸ್ವಿಟ್ ಫಾ.ಚಿಯಾಪಿ 1913ರಲ್ಲಿ ಈ ಮ್ಯೂಸಿಯಂ ಆರಂಭಿಸಿದ್ದರು.

15 ವರ್ಷಗಳಿಂದ ಚಾಪೆಲ್‌ಗೆ ಭೇಟಿ ನೀಡುತ್ತಿದ್ದೇನೆ. ಈ ಪೇಟಿಂಗ್‌ನಲ್ಲಿ ಎರಡು ದೇಶಗಳ ಸಂಸ್ಕೃತಿಗಳ ಮಿಲನವಾಗಿದೆ. ಇಟಲಿಯನ್ ಕಲೆಯ ಜತೆಗೆ ಭಾರತೀಯ ಕಲೆ ಕೂಡ ಬೆರೆತ ಕಲಾಕೃತಿಗಳು ಇಲ್ಲಿವೆ. ಮೊಸ್ಕೇನಿ ಅವರಿಗೆ ಹೂಗಳ ಮೇಲೆ ವಿಶೇಷವಾದ ಮೋಹವಿತ್ತು ಎನ್ನುವುದಕ್ಕೆ ಮಂಗಳೂರಿನ ಚಾಪೆಲ್‌ನ ವರ್ಣಗಳು ಸಾಕ್ಷಿ.
ಸಿಲ್ವಿಯಾನಾ ರಿಝ್ವಿ, ಚಾಪೆಲ್‌ನ ಮೂಲ ವರ್ಣಚಿತ್ರಕಾರರ ಸಂಬಂಧಿ