ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಅನಧಿಕೃತ ಒಎಫ್‌ಸಿ ಕೇಬಲ್ಗಳನ್ನು ತೆರವುಗೊಳಿಸಬೇಕು. ಅಂತಹ ಕಡೆಗಳಲ್ಲಿ ಮತ್ತೆ ಕಾನುನುಬಾಹಿರವಾಗಿ ಕೇಬಲ್ ಹಾಕದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪಾಲಿಕೆ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪೂರ್ವ ವಲಯ ವ್ಯಾಪ್ತಿಯ ಅರಮನೆ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ಮುಂಭಾಗದ ರಸ್ತೆ, ಕನ್ನಿಂಗ್ಯಾಮ್ ರಸ್ತೆ, ರೈಲ್ವೆ ದಂಡು ಪ್ರದೇಶದಲ್ಲಿ ತಪಾಸಣೆ ನಡೆಸಿದ ಬಳಿಕ ಅವರು ಗುರುವಾರ ಈ ಸೂಚನೆ ನೀಡಿದರು.
ಪಾದಚಾರಿ ಮಾರ್ಗದ ಕೆಲವೆಡೆ ಅನಧಿಕೃತ ಒಎಫ್‌ಸಿ ಕೇಬಲ್‌ಗಳು ನೇತಾಡುತ್ತಿವೆ. ಇವುಗಳಿಂದ ನಾಗರಿಕರಿಗೆ ತೊಂದರೆ ಆಗುವುದಿದ್ದು, ಕೂಡಲೆ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು. ಟೆಂಡರ್ ಶ್ಯೂರ್, ವೈಟ್ ಟಾಪಿಂಗ್ ರಸ್ತೆಗಳಲ್ಲಿ ಕೇಬಲ್ ಅಳವಡಿಸಲು ಪ್ರತ್ಯೇಕ ಡಕ್ಟ್ ವ್ಯವಸ್ಥೆ ಇದ್ದರೂ, ಇಂತಹ ಚಟುವಟಿಕೆ ಸರಿಯಲ್ಲ. ಹಾಗಾಗಿ ನಿಯಮಿತವಾಗಿ ಕಾರ್ಯಾಚರಣೆ ನಡೆಸಿ ಅನಧಿಕೃತ ಭಾಗಗಳನ್ನು ತೆರವುಗೊಳಿಸಲು ಅಗತ್ಯ ಸಿಬ್ಬಂದಿ ನಿಯೋಜಿಸಿಕೊಳ್ಳಲು ನಿದೇಶಿಸಿದರು.
ವಿದ್ಯುತ್ ಪರಿವರ್ತಕಗಳ ಬಳಿ ಸ್ವಚ್ಛತೆ ಕಾಪಾಡಿ:
ರಸ್ತೆ ಬದಿಯ ಫುಟ್‌ಪಾತ್ ಬಳಿ ವಿದ್ಯುತ್ ಪರಿವರ್ತಕಗಳಿದ್ದು, ಅಲ್ಲೆಲ್ಲ ನೈರ್ಮಲ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಇಂತಹ ಸ್ಥಳಗಳನ್ನು ಗುರುತಿಸಿ ಸ್ವಚ್ಛತೆ ಕೈಗೊಳ್ಳಬೇಕು. ಕೆಲವು ಪರಿವರ್ತಕಗಳು ಫುಟ್‌ಪಾತ್ ಮೇಲೆ ಇದ್ದು, ಅಲ್ಲಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಅರಮನೆ ರಸ್ತೆ, ವಸಂತನಗರದ 12ನೇ ಮುಖ್ಯರಸ್ತೆ ಹಾಗೂ ಕಂಟೋನ್ಮೆಂಟ್ ರೈಲ್ವೇ ಹಳಿ ಬಳಿ ಪಾದಚಾರಿ ಮಾರ್ಗ ನಿರ್ಮಾಣ ಮಾಡದಿರುವುದನ್ನು ಗಮನಿಸಿ, ಕೂಡಲೆ ಪರಿಶೀಲಿಸಿ ಎಲ್ಲೆಲ್ಲಿ ಹೊಸದಾಗಿ ಫುಟ್‌ಪಾತ್ ಅಗತ್ಯವಿದೆಯೋ ಅಂತಹ ಕಡೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ತಪಾಸಣೆ ವೇಳೆ ವಲಯ ಆಯುಕ್ತೆ ಸ್ನೇಹಲ್, ಯೋಜನಾ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಜಂಟಿ ಆಯುಕ್ತೆ ಸರೋಜಾ, ಮುಖ್ಯ ಅಭಿಯಂತರ ಸುಗುಣಾ ಹಾಗೂ ಇತರ ಅಧಿಕಾರಿಗಳಿದ್ದರು.
ಇಂದಿರಾ ಕ್ಯಾಂಟೀನ್‌ಗೆ ಭೇಟಿ:
ವಸಂತನಗರದ ಮಿಲ್ಲರ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳೊಂದಿಗೆ ಮಹೇಶ್ವರ್ ರಾವ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವರು ಬೆಳಗಿನ ಉಪಹಾರ ಇಡ್ಲಿ ಹಾಗೂ ವೆಜಿಟೆಬಲ್ ಪಲಾವ್ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ಉಪಹಾರದ ರುಚಿ ಚೆನ್ನಾಗಿದ್ದು, ಇನ್ನಷ್ಟು ಗುಣಮಟ್ಟ ಕಾಯ್ದುಕೊಳ್ಳುವ ಜತೆಗೆ ಶುಚಿತ್ವ ಕಾಪಾಡಲು ಸೂಚಿಸಿದರು.
ಭಿತ್ತಿಪತ್ರಗಳ ತೆರವುಗಳಿಸಿ:
ಅರಮನೆ ರಸ್ತೆ ಹಾಗೂ ಇನ್ನಿತರ ಕಡೆ ಗೋಡೆ, ಬ್ಯಾರಿಕೇಡ್‌ಗಳಿಗೆ ಭಿತ್ತಿಪತ್ರ ಅಂಟಿಸಿದ್ದು, ಅದರಿಂದ ನಗರ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದೆ. ಎಲ್ಲೆಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆಯೋ ಅಂತಹ ಕಡೆ ತೆರವುಗೊಳಿಸಬೇಕು. ರಸ್ತೆ ಬದಿ ಖಾಸಗಿ ಸಂಸ್ಥೆ, ಶಾಲಾ-ಕಾಲೇಜುಗಳ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ದಂಡ ವಿಧಿಸಲು ಮುಖ್ಯ ಆಯುಕ್ತರು ನಿರ್ದೇಶಿಸಿದರು.