More

    ಮೊದಲು ಮನಸ್ಸಿನಿಂದ ಡಿಸ್​ಲೈಕ್ ಬಟನ್ ಕಿತ್ತುಹಾಕಬೇಕು…; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​​ನಲ್ಲಿ ರವಿ ಬಸ್ರೂರು

    ಮೊದಲು ಮನಸ್ಸಿನಿಂದ ಡಿಸ್​ಲೈಕ್ ಬಟನ್ ಕಿತ್ತುಹಾಕಬೇಕು...; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​​ನಲ್ಲಿ ರವಿ ಬಸ್ರೂರುಪ್ರತಿಯೊಬ್ಬರಿಗೂ ಪ್ರತಿಭೆ ತೋರಿಸುವುದಕ್ಕೆ ಇಂದು ಸಾಕಷ್ಟು ವೇದಿಕೆಗಳಿವೆ. ಇವತ್ತಿಗೆ ಎಲ್ಲರೂ ಅವರವರೇ ಹಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆ; ಅವರೇ ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ. ಆ ಪೈಕಿ ಕೆಲವರು ಯಶಸ್ವಿಯಾಗಿದ್ದೂ ಉಂಟು. ಅವರನ್ನು, ಅವರ ಕೆಲಸವನ್ನು ಜನ ಸಹ ಒಪ್ಪಿದ್ದಾರೆ. ಅದರಿಂದ ಅವರಿಗೆ ಇನ್ನಷ್ಟು ಅವಕಾಶಗಳು ಸಹ ಸಿಕ್ಕಿವೆ. ಇವತ್ತು ಪ್ರತಿಭೆ ಇದ್ದರೆ, ಯಾರು ಬೇಕಾದರೂ ಬೆಳೆಯಬಹುದು. ಮುಂಚಿನಂತೆ ಈಗಲೂ ಚಿತ್ರರಂಗವೊಂದನ್ನೇ ನಂಬಿಕೊಂಡು ಕೂರುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ಆನ್​ಲೈನ್​ನಲ್ಲಿ ಸಾಕಷ್ಟು ವೇದಿಕೆಗಳಿದ್ದು, ಅದರ ಮೂಲಕ ಬೆಳೆಯುವುದಕ್ಕೆ ಸಾಧ್ಯವಿದೆ.

    ಆದರೆ, ಒಂದು ಸಮಸ್ಯೆ ಎಂದರೆ ಕಾಲೆಳೆಯುವ ಮತ್ತು ದೂರುವ ರೋಗ. ಕಾಲೆಳೆಯುವುದರ ಜತೆಗೆ, ಹಾಗೆ ಮಾಡಬಹುದು, ಹೀಗೆ ಮಾಡಿದ್ದರೆ ಚೆನ್ನಾಗಿತ್ತು ಎಂಬ ವಿಮರ್ಶೆಗಳಿಂದ ಹಲವರು ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ ಹೆದರುತ್ತಿದ್ದಾರೆ. ಇವತ್ತು ಸೋಷಿಯಲ್ ಮೀಡಿಯಾ ಹೇಗಾಗಿದೆಯೆಂದರೆ, ಎಲ್ಲರೂ ಎಲ್ಲದರ ಬಗ್ಗೆ ದೂರುತ್ತಲೇ ಇರುತ್ತಾರೆ. ಮುಂದೆ ತಮ್ಮ ಬಗ್ಗೆಯೂ ಬೇರೆಯವರು ಕಾಲೆಳೆಯಬಹುದು ಎಂದು ಯೋಚಿಸದೆ, ಮೂಗಿನ ನೇರಕ್ಕೆ ಮಾತನಾಡುತ್ತಿರುತ್ತಾರೆ. ಮೊದಲು ಒಂದು ಹಾಡು ಮಾಡಿಕೊಂಡು, ಕ್ಯಾಸೆಟ್​ಗೆ ಹಾಕಿ, ಅದನ್ನು ನಾಲ್ಕು ಜನರಿಗೆ ಹಂಚಬೇಕಿತ್ತು. ಅವರ ಅಭಿಪ್ರಾಯಗಳನ್ನು ಕೇಳಬೇಕಿತ್ತು. ಆದರೆ, ಈಗ ಬಿಟ್ಟಿ ಕೊಟ್ಟು, ಅದಕ್ಕೆ ಬದಲಿಗೆ ನೂರೆಂಟು ಅಪಸ್ವರಗಳನ್ನು ಕೇಳಬೇಕಾಗಿದೆ.

    ಇವತ್ತು ಪರಿಸ್ಥಿತಿ ಹೇಗಾಗಿದೆಯೆಂದರೆ, ಎಲ್ಲರೂ ಇನ್ನೊಬ್ಬರ ಹುಳುಕನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ. ಇನ್ನೊಬ್ಬರ ಒಳ್ಳೆಯ ಕೆಲಸಗಳನ್ನು ಬಿಟ್ಟು, ತಪ್ಪುಗಳನ್ನು ಹುಡುಕುವುದರಲ್ಲೇ ನಿರತರಾಗಿದ್ದಾರೆ. ಮೊದಲು ಮನಸ್ಸಿನಿಂದ ಈ ಡಿಸ್​ಲೈಕ್ ಬಟನ್ ಕಿತ್ತು ಹಾಕಬೇಕು. ಆಗ ಎಲ್ಲವೂ ಚೆನ್ನಾಗಿರುತ್ತದೆ. ಹೀಗೆ ಅಪಸ್ವರ ಹುಡುಕುವುದರಿಂದ ಮತ್ತು ಕಾಲೆಳೆಯುವುದರಿಂದ, ದ್ವೇಷ ಹೆಚ್ಚಾಗುತ್ತದೆಯೇ ಹೊರತು ಬಾಂಧವ್ಯ ಉಳಿಯುವುದಿಲ್ಲ. ಅಷ್ಟೇ ಅಲ್ಲ, ಎಲ್ಲರೂ ಇನ್ನೊಬ್ಬರ ಕಾಲೆಳೆಯುತ್ತಾ ಇದ್ದರೆ, ಯಾರಿಗೂ ಇನ್ನೊಬ್ಬರು ಮಾಡಿದ ಕೆಲಸ ಇಷ್ಟವಾಗುವುದಿಲ್ಲ.

    ಕೆಲವೊಮ್ಮೆಯಂತೂ ಬೇರೆಯವರಿಂದ ಸಣ್ಣ ಸ್ಪೂರ್ತಿ ಪಡೆದರೂ ಅದನ್ನೊಂದು ಕಳ್ಳತನ ಎಂದು ಬಿಂಬಿಸಲಾಗುತ್ತದೆ. ಸ್ಪೂರ್ತಿ ಇಲ್ಲದೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಯಾರೋ ಒಂದು ಒಳ್ಳೆಯ ಕೆಲಸ ಮಾಡಿದ್ದರೆ, ಅದರಿಂದ ಇನ್ನೊಬ್ಬರು ಸ್ಪೂರ್ತಿ ಪಡೆಯುವುದರಲ್ಲಿ ತಪ್ಪೇನಿಲ್ಲ. ನಾವು ಆಡುತ್ತಿರುವ ಮಾತು ಸಹ ಯಾರೋ ಪುಣ್ಯಾತ್ಮ ಬರೆದಿಟ್ಟಿದ್ದು. ಅದನ್ನು ಬಳಸಬಾರದು ಎಂದರೆ ಏನು ಮಾಡಬೇಕು? ಸ್ವರ ಕಂಡು ಹಿಡಿದವರೇ ಇದು ನನ್ನದು ಎಂದು ಹೇಳಿಲ್ಲ. ಅವರೇ ಇದು ನನ್ನ ಪೇಟೆಂಟ್ ಎಂದಿಲ್ಲ. ಹಾಗೆ ಮಾಡಿದ್ದರೆ ಸಂಗೀತ ಕ್ಷೇತ್ರದಲ್ಲಿ ಆವಿಷ್ಕಾರಗಳಾಗುತ್ತಿರಲಿಲ್ಲ. ಮೊಬೈಲ್ ಕಂಡು ಹಿಡಿದವರು ಇದನ್ನು ಯಾರೂ ಮಾಡುವಂತಿಲ್ಲ ಎಂದಿದ್ದರೆ, ಆಂಡ್ರಾಯ್್ಡ ಫೋನ್​ಗಳು ಬರುತ್ತಿರಲಿಲ್ಲ. ಆವಿಷ್ಕಾರಗಳು ಆಗಬೇಕಿದ್ದರೆ ಓಪನ್ ಆಗಿರಬೇಕು. ಇದು ಕಾಪಿ ಅಂತ ಹೇಳುವುದೆಷ್ಟು ಸರಿ? ಯಾವುದೇ ಕ್ಷೇತ್ರ ಇರಲಿ. ಕಲಾವಿದನಿಗೆ ಏನನ್ನೋ ನೋಡಿಯೋ, ಕೇಳಿಯೋ, ಓದಿಯೋ … ಆ ಕ್ಷಣಕ್ಕೆ ಅವನಿಗೆ ಅದೊಂದು ಸ್ಪಾರ್ಕ್ ತಂದಿರಬಹುದು. ಕಂಡಿದ್ದು, ಕೇಳಿದ್ದು ಮತ್ತು ಓದಿದ್ದರಲ್ಲಿ ಅವನಿಗೇನೋ ಇಷ್ಟವಾಗಿರಬಹುದು. ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅವನು ಇನ್ನೇನೋ ಮಾಡಿರಬಹುದು. ಸಾಧ್ಯವಾದರೆ ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅದನ್ನು ದೊಡ್ಡದು ಮಾಡಬಾರದು. ಇನ್ನೊಬ್ಬರ ಬಗ್ಗೆ ಕೆಟ್ಟದ್ದು ಮಾತಾಡಿ, ಕೆಟ್ಟದ್ದು ಯೋಚನೆ ಮಾಡಿ ರಕ್ತಕಣಗಳನ್ನು ಯಾಕೆ ಸಾಯಿಸಿಕೊಳ್ಳಬೇಕು?

    ಯಾವುದೇ ಕೆಲಸವಾದರೂ ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಅದರದ್ದೇ ಆದ ಕಷ್ಟಗಳಿರುತ್ತವೆ. ಅದು ಸಂಗೀತ ಸಂಯೋಜನೆಯಿರಬಹುದು, ಲೇಖನ ಬರೆಯುವುದಿರಬಹುದು ಅಥವಾ ಚಿತ್ರ ಬಿಡಿಸುವುದಿರಬಹುದು. ಅದಕ್ಕೆ ಅದರದ್ದೇ ಆದ ಸಮಯ, ಶ್ರಮ, ಶ್ರದ್ಧೆ … ಎಲ್ಲವೂ ಇರುತ್ತದೆ. ಅದು ಹೀಗಿರಬೇಕಿತ್ತು, ಹಾಗಿರಬೇಕಿತ್ತು ಎಂದು ದೂರದಲ್ಲಿ ಕುಳಿತು ವಿಮರ್ಶೆ ಮಾಡುವುದು ಸುಲಭ. ಆದರೆ, ಅದೇ ಆ ಸ್ಥಾನದಲ್ಲಿ ನಿಂತು ಒಂದು ಕೆಲಸ ಮಾಡುವುದು ಕಷ್ಟ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕಲ್ಪನೆ ಇರುತ್ತದೆ. ಅವರು ತಮ್ಮದೇ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಹಾಗಂತ ಅವನಿಗೆ ಯೋಗ್ಯತೆ ಇಲ್ಲ ಎಂದು ಹೇಳಲಾಗದು. ಒಂದು ಕಡೆ ಊಟ ಮಾಡುತ್ತಲೇ, ಇನ್ನೊಬ್ಬರು ಮಾಡಿದ ಅಡುಗೆ ಚೆನ್ನಾಗಿರುತ್ತದೆ ಎಂದರೆ ತಿಂದಿದ್ದು ಮೈಗೆ ಹತ್ತುವುದಿಲ್ಲ. ಹಾಗಾಗಿ, ಮೊದಲು ಬೇರೆಯವರನ್ನು ಹಳಿಯುವ ಮತ್ತು ಡಿಸ್​ಲೈಕ್ ಮಾಡುವ ಬಟನ್ ಅನ್ನು ನಮ್ಮ ಮನಸ್ಸಿನಿಂದ ಕಿತ್ತು ಹಾಕಬೇಕು. ನಾವು ಇನ್ನೊಬ್ಬರನ್ನು ಇಷ್ಟಪಡದಿದ್ದರೆ, ನಮ್ಮನ್ನು ಬೇರೆಯವರು ಯಾಕೆ ಇಷ್ಟಪಡುತ್ತಾರೆ?

    ಕಲಾವಿದರ ಜೀವನ ಬೇರೆಯವರ ತರಹ ಅಲ್ಲ. ಬೇರೆಯವರ ಕೆಲಸಗಳಿಗೆ ನಿರ್ದಿಷ್ಟವಾದ ಒಂದು ಸಮಯವಿರುತ್ತದೆ. ಆದರೆ, ಈ ಕ್ಷೇತ್ರದಲ್ಲಿರುವವರ ತಲೆಯಲ್ಲಿ ಇರುವುದು ಒಂದೇ. ತಾನೊಂದು ಸಿನಿಮಾ ಮಾಡಬೇಕು ಮತ್ತು ಅದನ್ನು ಜನರಿಗೆ ತೋರಿಸಬೇಕು ಎಂಬುದೊಂದೇ ಅವರ ತಲೆಯಲ್ಲಿ ಇರುತ್ತದೆ. ಅದರಲ್ಲಿ ದುಡ್ಡು ಬರುತ್ತದೋ, ಇಲ್ಲವೋ ಬೇರೆ. ಚಿತ್ರರಂಗದಲ್ಲಿ ಹಲವರು ಚಿತ್ರ ಮಾಡುತ್ತಿದ್ದಾರೆ. ಅವರಲ್ಲಿ ಎಷ್ಟು ಜನ ದುಡ್ಡು ಮಾಡಿದ್ದಾರೆ ಎಂದು ಒಮ್ಮೆ ಸುಮ್ಮನೆ ಕೇಳಿ ನೋಡಿ? ಇಲ್ಲಿ ಬಹಳಷ್ಟು ಜನ ದುಡ್ಡು ಕಳೆದುಕೊಂಡಿರುತ್ತಾರೆ. ಅವರೆಲ್ಲರೂ ಜನರನ್ನು ಖುಷಿಪಡಿಸುವುದಕ್ಕೆ ಕೆಲಸ ಮಾಡುತ್ತಿರುತ್ತಾರೆ. ಇದನ್ನು ಯಾಕೆ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ? ಯಾಕೆ ಎಲ್ಲರೂ ಇನ್ನೊಬ್ಬರ ಹುಳುಕನ್ನೇ ಹುಡುಕುವುದರಲ್ಲಿ ಮಗ್ನರಾಗಿದ್ದಾರೆ? ಎಂಬುದು ನನ್ನ ಪ್ರಶ್ನೆ.

    ಕಲೆಯನ್ನು ಬೇರೆ ದೃಷ್ಟಿಯಲ್ಲಿ ನೋಡಿ. ಅದನ್ನು ತಕ್ಕಡಿಗೆ ಹಾಕಬಾರದು. ಎಲ್ಲರೂ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ಎಷ್ಟು ಸಾಧ್ಯವೋ, ಅಷ್ಟನ್ನೇ ಮಾಡುತ್ತಾರೆ. ಎಲ್ಲರೂ ಮೈಕಲ್ ಜಾಕ್ಸನ್ ಆಗುವುದಕ್ಕೆ ಸಾಧ್ಯವೇ? ಎಲ್ಲರೂ ರೆಹಮಾನ್ ಆಗುವುದಕ್ಕೆ ಸಾಧ್ಯವೇ? ಖಂಡಿತಾ ಇಲ್ಲ. ಹಾಗಿರುವಾಗ, ಈಗಷ್ಟೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವವನನ್ನು ರೆಹಮಾನ್​ಗೆ ಯಾಕೆ ಹೋಲಿಸಬೇಕು? ಅವರಿಗೆ ಒಳ್ಳೆಯ ವ್ಯವಸ್ಥೆ ಸಿಕ್ಕಿರುತ್ತದೆ. ಅದಕ್ಕೆ ಒಳ್ಳೆಯ ಕೆಲಸ ಅವರಿಂದಾಗಿರುತ್ತದೆ. ಅದು ಇಲ್ಲಿ ಸಿಕ್ಕಿಲ್ಲದಿರಬಹುದು. ಹೂ ಬೆಳೆಯುವುದಕ್ಕೆ ಒಳ್ಳೆಯ ಗೊಬ್ಬರ, ಗಾಳಿ ಮತ್ತು ನೀರು ಬೇಕು. ಅದು ಸಿಗದಿದ್ದರೆ ಹೂವಿನ ತಪ್ಪೇನು?

    ಕಲಾವಿದರನ್ನು ಕಲಾವಿದರನ್ನಾಗಿ ನೋಡುವ ಪರಿಪಾಠ ಹೆಚ್ಚಬೇಕು. ಅವರನ್ನು ತೂಕದ ತಕ್ಕಡಿಗೆ ಹಾಕುವುದು ನಿಲ್ಲಬೇಕು. ಆಗಷ್ಟೇ ಇನ್ನಷ್ಟು ಒಳ್ಳೆಯ ಕೆಲಸವಾಗುವುದಕ್ಕೆ ಸಾಧ್ಯವಾಗುತ್ತದೆ.

    (ಲೇಖಕರು ಸಂಗೀತ ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts