ಸಿಬಿಐನಿಂದ ವರ್ಮಾರನ್ನು ವಜಾ ಮಾಡಿದ್ದು ಸರಿಯಲ್ಲ, ಅನ್ಯಾಯ: ಕೇಂದ್ರದ ನಡೆ ಖಂಡಿಸಿದ ಬಿಜೆಪಿ ಸಂಸದ ಸ್ವಾಮಿ

ನವದೆಹಲಿ: ಅಲೋಕ್​ ವರ್ಮಾ ಅವರನ್ನು ಸಿಬಿಐನ ನಿರ್ದೇಶಕ ಸ್ಥಾನದಿಂದ ವಜಾ ಮಾಡಿದ್ದು ಸರಿಯಲ್ಲ ಮತ್ತು ಸಂಪೂರ್ಣ ಅನ್ಯಾಯ ಎಂದು ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ಹೋರಾಟದ ಮೂಲಕ ಮರಳಿ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್​ ವರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಯ್ಕೆ ಸಮಿತಿ ವಜಾಗೊಳಿಸಿತ್ತು. ಈ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ಸ್ವಾಮಿ, ” ಪ್ರಧಾನಿ ಮೋದಿ ನೇತೃತ್ವದ ಆಯ್ಕೆ ಸಮಿತಿ ತಪ್ಪಾದ ನಿರ್ಧಾರ ಕೈಗೊಂಡಿದೆ. ಇದು ಅಲೋಕ್​ ವರ್ಮಾ ಅವರಿಗೆ ಮಾಡಿದ ಅನ್ಯಾಯ. ಈ ಬೆಳವಣಿಗೆಯನ್ನು ಮೋದಿ ಅವರು ಮತ್ತೊಮ್ಮೆ ಪರಾಮರ್ಶಿಸಬೇಕು ಎಂದು ನಾನು ಬಯಸುತ್ತೇನೆ,” ಎಂದು ಹೇಳಿದ್ದಾರೆ.

ಅಲೋಕ್​ ವರ್ಮಾ ಮೇಲಿನ ಭ್ರಷ್ಟಾಚಾರದ ಆರೋಪಗಳಿಗೆ ಸಾಕ್ಷಿಗಳಿಲ್ಲ ಎಂದೂ ಸ್ವಾಮಿ ಹೇಳಿದರು. ” ಅಲೋಕ್​ ವರ್ಮಾ ಮೇಲಿನ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ನೇಮಿಸಿದ್ದ ಕೇಂದ್ರ ವಿಚಕ್ಷಣಾ ಆಯೋಗದ (ಸಿವಿಸಿ) ಮೇಲ್ವಿಚಾರಕರಾಗಿದ್ದ, ನಿವೃತ್ತ ನ್ಯಾಯಮೂರ್ತಿ ಎ.ಕೆ ಪಾಟ್ನಾಯಕ್​ ಅವರ ಮಾತನ್ನು ನಾನು ಒಪ್ಪುತ್ತೇನೆ. ಅಲೋಕ್​ ವರ್ಮ ಮೇಲಿನ ಆರೋಪಗಳು ನಿರಾಧಾರ ಎಂದು ಅವರು ಹೇಳಿದ್ದರು. ಆದರೆ, ಸಿವಿಸಿ ಮಾತೇ ಅಂತಿಮವೂ ಅಲ್ಲ ,”ಎಂದೂ ಸ್ವಾಮಿ ತಿಳಿಸಿದರು.

ಅಲೋಕ್​ ವರ್ಮಾ ಅವರ ಪ್ರಕರಣದ ತನಿಖೆಗೆ ರಚನೆಯಾಗಿದ್ದ ಸಿವಿಸಿ ಮೇಲ್ವಿಚಾರಣೆ ಹೊಣೆಯನ್ನು ಸುಪ್ರೀಂ ಕೋರ್ಟ್​ ಎಕೆ ಪಾಟ್ನಾಯಕ್​ ಅವರಿಗೆ ವಹಿಸಿತ್ತು. ಅದರಂತೆ ಸಿವಿಸಿ ತನ್ನ ತನಿಖಾ ವರದಿಯನ್ನು ಮೊದಲು ಪಟ್ನಾಯಕ್​ ಅವರಿಗೆ ನೀಡಬೇಕಿತ್ತು. ಆದರೆ, ಸಿವಿಸಿ ಪಟ್ನಾಯಕ್​ ಅವರನ್ನು ಒಂದು ಮಾತು ವಿಚಾರಿಸದೇ ಮೋದಿ ಅವರಿಗೆ ಮೊದಲು ವರದಿ ಸಲ್ಲಿಕೆ ಮಾಡಿತು. ಎಲ್ಲೋ ಒಂದು ಕಡೆ ಸಿವಿಸಿ ತಪ್ಪು ಮಾಡಿದೆ ಎಂದು ಅನಿಸುತ್ತದೆ. ಸಿವಿಸಿಯನ್ನು ರದ್ದು ಮಾಡಬೇಕು,” ಎಂದು ಅವರು ಹೇಳಿದ್ದಾರೆ.

ಮುಂದುವರಿದು, ” ಸಿವಿಸಿ ಎಂಬುದು ಪಿ.ಚಿದಂಬರಮ್​ ಕಾಲದಿಂದಲೂ ಒಂದು ಬೋಗಸ್​. ಈಗ ಜೇಟ್ಲಿ ಅವರೂ ಬಲವಂತದಿಂದ ಸಿವಿಸಿ ರಚನೆ ಮಾಡಿದ್ದಾರೆ. ಆದರೆ, ಇದಕ್ಕೆಲ್ಲ ಮೋದಿ ಕಾರಣರೂ ಅಲ್ಲ. ಇಂಥ ಸಣ್ಣಪುಟ್ಟ ವಿಚಾರಗಳನ್ನು ಅವರೇ ನೋಡಬೇಕಿಲ್ಲ. ಸತ್ಯ ಮಾತನಾಡುವವರು ಅವರ ಜತೆಗಿರಬೇಕಿದೆಯಷ್ಟೇ. ತಮ್ಮ ಮೇಲಿನ ಆರೋಪಗಳನ್ನು ಸಮರ್ಥಿಸಿಕೊಳ್ಳಲು ವರ್ಮಾ ಅವರನ್ನು ಸಿವಿಸಿ ಆಹ್ವಾನಿಸಬೇಕಿತ್ತು,” ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.