More

    ಪರಿಹಾರ ನೀಡುವಲ್ಲಿ ವಿಫಲ

    ಚಿಕ್ಕೋಡಿ: ಪ್ರವಾಹ ಸಂದರ್ಭ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಚಿಕ್ಕೋಡಿ ತಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ತಾಪಂ ಅಧ್ಯಕ್ಷೆ ಉರ್ಮಿಳಾ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಯಾವುದೇ ತಾರತಮ್ಯ ಮಾಡದೇ ಅರ್ಹ ಫಲಾನುಭವಿಗಳಿಗೆ ಮನೆ ದೊರೆಯಲು ಮತ್ತೊಮ್ಮೆ ಸರ್ವೇ ನಡೆಸಬೇಕು. ಕೃಷ್ಣಾ, ವೇಧಗಂಗಾ ಹಾಗೂ ದೂಧಗಂಗಾ ನದಿಗಳ ಅಬ್ಬರದಿಂದ ಉಂಟಾದ ಪ್ರವಾಹದಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಭೀಕರ ಪ್ರವಾಹ ಎದುರಾಗಿ ಪ್ರತಿ ಗ್ರಾಮದಲ್ಲಿ ನೂರಾರು ಮನೆಗಳು ಬಿದ್ದು ಹೋಗಿವೆ. ಆದರೆ, ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಸರ್ವೇ ನಡೆಸಿದೆ. ಈಗ ಸರ್ವೇಯಲ್ಲಿ ಉಳಿದುಕೊಂಡಿರುವ ಸಂತ್ರಸ್ತರ ಮನೆಗಳನ್ನು ಮತ್ತೊಮ್ಮೆ ಸರ್ವೇ ಮಾಡಬೇಕು ಎಂದು ತಾಪಂ ಸದಸ್ಯರು ಒತ್ತಾಯಿಸಿದರು. ಪ್ರವಾಹ ಬಂದು ಮೂರು ತಿಂಗಳು ಕಳೆದರೂ ಈವರೆಗೆ ಬಿದ್ದ ಮನೆಗಳಿಗೆ ಸಮರ್ಪಕವಾಗಿ ಪರಿಹಾರ ನೀಡುತ್ತಿಲ್ಲ, ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಪರಿಹಾರ ದೊರೆಯುತ್ತಿಲ್ಲ. ಪ್ರತಿ ಗ್ರಾಮದಲ್ಲಿ 250ರಿಂದ 300ರ ವರೆಗೆ ಮನೆಗಳ ಮರು ಸರ್ವೇ ಮಾಡಬೇಕಿದೆ. ಕಳೆದ 15 ದಿನಗಳ ಹಿಂದೆಯಷ್ಟೇ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಅಧಿಕಾರಿಗಳ ಸಭೆ ಕರೆದು ತಾರತಮ್ಯ ಮಾಡದೆ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲು ಸೂಚಿಸಿದ್ದರು. ಆದರೆ, ಅಧಿಕಾರಿಗಳು ಸಚಿವರ ಮುಂದೆ ಒಪ್ಪಿಕೊಂಡು ಈಗ ಸರ್ಕಾರದ ಮಟ್ಟದಲ್ಲಿ ತಾಂತ್ರಿಕ ತೊಂದರೆ ಇದೆ ಎಂದು ನೆಪ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಧರಣಿಗೆ ಅನುಮತಿ ನೀಡಿ: ಬಿಟ್ಟು ಹೋಗಿರುವ ಮನೆಗಳನ್ನು ಮರಳಿ ಸರ್ವೇ ಮಾಡಲು ಅಧಿಕಾರಿಗಳು ತಂಡ ರಚಿಸಿ ಸರ್ವೇ ಕೆಲಸ ಆರಂಭಿಸಬೇಕು. ಇಲ್ಲದಿದ್ದರೆ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸಭೆಗೆ ಬಂದು ಲಿಖಿತವಾಗಿ ಬರೆದುಕೊಡಬೇಕು. ಇಲ್ಲದಿದ್ದರೆ ಡಿಸಿ ಕಚೇರಿ ಎದುರು ಧರಣಿ ನಡೆಸಲು ಅನುಮತಿ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ತಾಪಂ ಸದಸ್ಯ ಎಸ್.ಎಸ್.ಭೀಮನ್ನವರ ಮಾತನಾಡಿ, ಮಾಂಜರಿಯಲ್ಲಿ 400ಕ್ಕಿಂತ ಹೆಚ್ಚು ಮನೆಗಳ ಸರ್ವೇ ಮಾಡುವ ಕಾರ್ಯ ಉಳಿದುಕೊಂಡಿದೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ತಡವಾಗಿ ಸಭೆಗೆ ಆಗಮಿಸಿದ 2ನೇ ದರ್ಜೆಯ ತಹಸೀಲ್ದಾರ್ ಎ.ಎ.ಜಮಾದಾರ ಮತ್ತು ಉಪತಹಸೀಲ್ದಾರ್ ಸಿ.ಎ.ಪಾಟೀಲ ತಾಪಂ ಸದಸ್ಯರ ಮನವೊಲಿಸಲು ಪ್ರಯತ್ನ ಮಾಡಿದರೂ ಕೂಡ ಸಫಲವಾಗಲಿಲ್ಲ. ಬಳಿಕ ಅಧಿಕಾರಿಗಳು ಉಪವಿಭಾಗಾಧಿಕಾರಿ ಅವರನ್ನು ಸಂಪರ್ಕಿಸಿ 2 ದಿನಗಳಲ್ಲಿ ಸರ್ವೇ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಭರವಸೆ ನೀಡಿದರು. ತಾಪಂ ಉಪಾಧ್ಯಕ್ಷೆ ಮಹಾದೇವಿ ನಾಯಿಕ, ಸದಸ್ಯ ರವೀಂದ್ರ ಮಿರ್ಜೆ, ಕೆ.ಎಸ್.ಪಾಟೀಲ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts