ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಬೇಸರ
ಬೇಲೂರು : ಧಾರ್ಮಿಕ ಆಚರಣೆಗಳು ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಪ್ರತಿಯೊಬ್ಬರೂ ಧರ್ಮದ ಆಚರಣೆಯಲ್ಲಿ ಸಕ್ರಿಯವಾದಾಗ ಮಾತ್ರ ಸದೃಢ ಸಮಾಜ ಕಟ್ಟಲು ಸಾದ್ಯ ಎಂದು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮಲ್ಲನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಮರು ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ದೇಶದಲ್ಲಿ ಧಾರ್ಮಿಕ ವಿಚಾರಗಳ ಮೇಲಿನ ಆಸಕ್ತಿ ಕುಂಠಿತವಾಗುತ್ತಿರುವುದು ಕಂಡು ಬರುತ್ತಿದೆ. ಆಡಂಬರದ ಜೀವನದಿಂದ ಯಾವುದೇ ಪ್ರಯೋಜನವಿಲ್ಲ. ಪ್ರತಿಯೊಬ್ಬರ ಲೌಕಿಕ ಪ್ರಗತಿಗೆ ಆಧ್ಯಾತ್ಮಿಕ ಜ್ಞಾನ ಅತ್ಯವಶ್ಯಕ. ಅಲ್ಲದೆ ಕಾಯಕದ ಜತೆಗೆ ಧರ್ಮಾಚರಣೆಗಳು ಮುಖ್ಯವಾಗಿದೆ. ಗುರು ಶಿಷ್ಯರ ಬಾಂಧವ್ಯ ಗಟ್ಡಿಯಾಗಬೇಕಿದೆ. ಕೌಟುಂಬಿಕ ಬದುಕಿನಲ್ಲಿ ಸಾಮರಸ್ಯ ಬರಬೇಕು. ಗ್ರಾಮದಲ್ಲಿ ನೂತನ ದೇಗುಲ ನಿರ್ಮಿಸಿದರೆ ಸಾಲದು, ಮುಂದಿನ ದಿನಗಳಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೂ ಬದ್ಧರಾಗಬೇಕು ಎಂದರು.
ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾರಿಗೂ ಧಾರ್ಮಿಕ ವಿಚಾರ ಬೇಕಿಲ್ಲ. ದೇಗುಲ ಉದ್ಘಾಟನೆಯಲ್ಲಿ ವೈಭವ ಇರುತ್ತದೆ. ವರ್ಷ ಕಳೆದರೆ ಸ್ವಚ್ಛತೆ ನಿರ್ವಹಣೆ ಇಲ್ಲದಿರುವುದು ಶೋಚನೀಯ, ದೇಗುಲಗಳನ್ನು ದುಶ್ಚಟಗಳಿಗೆ ಬಳಕೆ ಮಾಡಿಕೊಳ್ಳಬಾರದು ಎಂದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ತಮ್ಮಡ್ಡಿಹಳ್ಳಿ ವಿರಕ್ತಮಠದ ಶ್ರೀ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಧರ್ಮದ ಅಂದಾನುಕರಣೆ ಹೆಚ್ಚಾಗಿ ಹಾಲು ಕೊಡುವ ಗೋ ಮಾತೆಯ ಕೆಚ್ಚಲು ಕತ್ತರಿಸುವ ಮಟ್ಟಕ್ಕೆ ಬೆಳೆದಿದೆ ಎಂದರೆ ಮುಂದಿನ ದಿನಗಳಲ್ಲಿ ಕೋಮು ಸೌಹಾರ್ದತೆ ಹೇಗೆ ತಾನೇ ಕಾಪಾಡಲು ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದ್ದರು.
ಕರಡಿಗವಿ ಮಠದ ಶ್ರೀ ಶಿವಶಂಕರ ಸ್ವಾಮೀಜಿ, ಕಾಗಿನೆಲೆ ಮಠದ ಶ್ರೀ ಡಾ.ಶಿವಾನಂದಪುರಿ ಸ್ವಾಮೀಜಿ, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ ನಾಗೇಂದ್ರ, ಉದ್ಯಮಿ ಗ್ರಾನೈಟ್ ರಾಜಶೇಖರ, ಹಾಸ್ಯನಟ ಡಿಂಗ್ರಿ ನಾಗರಾಜ್, ಮುಖಂಡರಾದ ದೊಡ್ಡವೀರೇಗೌಡ, ಉಮಾಶಂಕರ್, ಗಿರೀಶ್, ಚಂದ್ರಶೇಖರಯ್ಯ, ಪೋಲಿಸ್ ದೇವರಾಜ್, ಪ್ರಮೋದ್, ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್, ಮಹೇಶ, ಅಮಿತ್‌ಶೆಟ್ಟಿ ಸೇರಿದಂತೆ ಇತರರಿದ್ದರು.