More

    ಸಂತಸದ ಬಾಳಿಗೆ ಧರ್ಮದ ದಾರಿ

    ಜಾಗತೀಕರಣ, ಉದಾರೀಕರಣ, ಆಧುನೀಕರಣ, ಖಾಸಗೀಕರಣದತ್ತ ಮನುಷ್ಯ ಜಾರುತ್ತ. ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿರುವನು. ಮಾನವೀಯತೆಯ ಸದ್ಗುಣ, ಸಂಸ್ಕಾರಗಳು ಇಲ್ಲದಂತಾಗಿವೆ. ಕಬ್ಬಿಣವು ಮಣಿಸಲಾರದಷ್ಟು ಗಟ್ಟಿಯಾಗಿದ್ದರೂ ತುಕ್ಕಿನಿಂದ ದುರ್ಬಲಗೊಳ್ಳುತ್ತದೆ. ಹಾಗೆಯೇ ಮನುಷ್ಯ ದೈಹಿಕವಾಗಿ ಸದೃಢವಾಗಿದ್ದರೂ ಮಾನಸಿಕವಾಗಿ ದುರ್ಬಲಗೊಳ್ಳುತ್ತಿರುವುದನ್ನು ಕಾಣುತ್ತೇವೆ.

    ಸಂತಸದ ಬಾಳಿಗೆ ಧರ್ಮದ ದಾರಿಹೊಸ ಸಂಬಂಧ ಪ್ರಾಪ್ತವಾದ ತಕ್ಷಣ ಜನ ಹಳೆಯದನ್ನು ಮರೆತು ಬಿಡುವುದು ಒಳ್ಳೆಯ ಲಕ್ಷಣವಲ್ಲ. ಮರದಿಂದ ಉದುರಿಹೋದರೂ ಹಣ್ಣೆಲೆ ಮರದ ಬುಡದಲ್ಲಿ ಬಿದ್ದು ಗೊಬ್ಬರವಾಗಿ ಹೊಸ ಎಲೆ ಚಿಗುರಲು ಸಹಾಯಕವಾಗುತ್ತದೆ. ಸವಾಲುಗಳನ್ನು ಸ್ವೀಕರಿಸುವ ಪ್ರವೃತ್ತಿ ಬೆಳೆಸಿಕೊಂಡರೆ ಮನಸ್ಸಿನಲ್ಲಿ ಗೆಲುವಿನ ಉತ್ಸಾಹ ಬೆಳೆಯುತ್ತದೆ. ಸಾಧನೆಗೆ ತಕ್ಕಂತೆ ಯಶಸ್ಸು ಇರುತ್ತದೆ. ಆತ್ಮವಿಶ್ವಾಸವೇ ಸಾಧನೆಯ ಅಡಿಗಲ್ಲು. ನಮ್ಮನ್ನು ಇಷ್ಟಪಡುವವರನ್ನು ಪ್ರೀತಿಸುವುದು ದೊಡ್ಡದಲ್ಲ. ನಮ್ಮನ್ನು ದ್ವೇಷಿಸುತ್ತಿರುವವರನ್ನು ಪ್ರೀತಿಸುವುದು ದೊಡ್ಡತನ. ಸುಖ ದುಃಖಗಳು ಬೆಳಕು ಕತ್ತಲೆ ಇದ್ದಂತೆ. ಯಾವುದೂ ಶಾಶ್ವತವಲ್ಲ. ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ನಿಜವಾದ ಶಿಕ್ಷಣವೆಂದು ಸ್ವಾಮಿ ವಿವೇಕಾನಂದರು ಎಚ್ಚರಿಸಿದ್ದಾರೆ. ಸ್ವಹಿತಾಸಕ್ತಿಯೇ ಹೆಚ್ಚಾದರೆ ಯಾವ ಸಾಧನೆಗೂ ಬೆಲೆ ಬರುವುದಿಲ್ಲ. ಆತ್ಮವಿಶ್ವಾಸವುಳ್ಳ ವ್ಯಕ್ತಿಗೆ ಕಾಣಿಸುವುದು ಗುಲಾಬಿ ಹೂವೇ ಹೊರತು ಅದರ ಮುಳ್ಳಲ್ಲ. ಈ ಜೀವಜಗತ್ತಿಗೆ ಭಗವಂತ ಕೊಟ್ಟ ಸಮೃದ್ಧಿ ಅತ್ಯಮೂಲ್ಯ. ಧರ್ಮಕ್ಕೆ, ದೇವರಿಗೆ, ಗುರುವಿಗೆ ಕೃತಜ್ಞತೆಯಿಂದ ನಡೆದು ಬದುಕಿನಲ್ಲಿ ಶಾಂತಿ ಉನ್ನತಿ ಪಡೆದು ಸುಖಮಯವಾಗಿ ಬಾಳಬೇಕು. ಕಲಿಕಾಲದ ಕಾಮೋಡದಲ್ಲಿ ಮನುಷ್ಯನ ಚಿತ್ತ ಚಂಚಲಗೊಳ್ಳುತ್ತದೆ. ತನ್ನತನ ಮರೆತು ಪಶುವಿನಂತೆ ವರ್ತಿಸುತ್ತಿರುವುದು ಒಳ್ಳೆಯದಲ್ಲ. ಆದರ್ಶವಾಗಿ ಬಾಳಿ ಬದುಕಬೇಕಾದ ಮನುಷ್ಯ ಸ್ವಾರ್ಥ, ಸಂಕುಚಿತ ಮನಸ್ಸಿನಿಂದ ಕಲುಷಿತ ವಾತಾವರಣ ನಿರ್ಮಾಣ ಮಾಡುತ್ತಿರುವುದು ನೋವಿನ ಸಂಗತಿ. ಸಂಪತ್ತಿನ-ಅಧಿಕಾರದ ಮದದಲ್ಲಿ ಧರ್ಮ-ದೇವರ ಬಗ್ಗೆ ದುರಾಲೋಚನೆ, ಹದ್ದು ಮೀರಿದ ವರ್ತನೆ ಕೇಡಿಗೆ ಮೂಲ. ದುಷ್ಟಶಕ್ತಿ ನಿರ್ನಾಮಗೊಂಡು ಎಲ್ಲೆಡೆ ಸಾತ್ವಿಕ ಶಕ್ತಿಗಳು ಬೆಳೆದುಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts