ಸದ್ಗುಣ ನಿಜವಾದ ಆಸ್ತಿಯಾಗಲಿ

ಬಾಳೆಹೊನ್ನೂರು: ನೆಮ್ಮದಿಯ ಜೀವನಕ್ಕೆ ಧರ್ಮ ಪಾಲನೆ ಮುಖ್ಯವೇ ಹೊರತು ಹಣ ಗಳಿಕೆಯೇ ಶಾಶ್ವತವಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಂಪತ್ತಿಗಿಂತ ಸದ್ಗುಣ, ಸಂಸ್ಕಾರ ಈ ನಾಡಿನ ಜನರ ನಿಜವಾದ ಆಸ್ತಿ ಎಂದರು.

ಗುರಿ ಸಾಧನೆಯಿಲ್ಲದ ಜೀವನ ವ್ಯರ್ಥ. ಬದುಕು ಒಂದು ನಾಣ್ಯ. ಸುಖ-ದುಃಖ ನಾಣ್ಯದ ಎರಡು ಮುಖ. ಧರ್ಮ, ನೀತಿ, ದಕ್ಷತೆ, ಒಳ್ಳೆಯ ಮಾತು ಬದುಕಿನ ಶ್ರೇಯಸ್ಸಿಗೆ ಕಾರಣ. ಸತ್ಯ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಸತ್ಯದ ರಕ್ಷಾಕವಚ ನಾಶಗೊಂಡರೆ ಧರ್ಮ, ಸಂಸ್ಕಾರ, ಪರಂಪರೆ, ಆದರ್ಶಗಳು ಉಳಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಪುರಾಣ ಪ್ರವಚನ ಮಾಡಿದ ತಾವರೆಕೆರೆ ಶಿಲಾ ಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನುಷ್ಯನಿಗೆ ಕನಸು ನೂರಾರಿದ್ದರೂ ಮನಸ್ಸು ಮಾತ್ರ ಒಂದಿರಬೇಕು. ಯೋಜನೆ ಎಷ್ಟಾದರೂ ಇರಲಿ ಗುರಿ ಮಾತ್ರ ಒಂದಿರಬೇಕಾಗುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಬದುಕಿನಲ್ಲಿ ನೈಜ ಸಂಬಂಧಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ತಿಳಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಅಮೂಲ್ಯವಾದ ಧರ್ಮ ಜ್ಞಾನದ ಸಂಪತ್ತನ್ನು ನೀಡಿದ್ದಾರೆ ಎಂದು ಹೇಳಿದರು.

ಬೇರುಗಂಡಿ ಮಠದ ಶ್ರೀ ರೇಣುಕ ಮಹಂತ ಶಿವಾಚಾರ್ಯ ಸ್ವಾಮೀಜಿ ಇದ್ದರು. ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೊಷ, ಶ್ರೀ ಗುರು ದಾರುಕಾಚಾರ್ಯ ಶಾಸ್ತ್ರಿಗಳಿಂದ ಭಕ್ತಿಗೀತೆ ಗಾಯನ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ಸ್ವಾಗತಿಸಿದರು.

 

ಕಲ್ಲು ಮುಳ್ಳುಗಳಿಂದ ತುಂಬಿದ ಜೀವನ ಮಾರ್ಗದಲ್ಲಿ ಹೂ ಗಿಡಗಳನ್ನು ನೆಟ್ಟು ಪರಿಮಳ ಬೀರುವಂತೆ ಮಾಡುವುದೇ ಸತ್ಪುರುಷರ ಧ್ಯೇಯ. ಜನ ಸತ್ಯಕ್ಕಿಂತ ಸುಳ್ಳನ್ನು ಬೇಗ ನಂಬುತ್ತಾರೆ. ಶುದ್ಧ ಹಾಲು ಮಾರಲು ಬೀದಿ ಬೀದಿ ತಿರುಗಾಡಬೇಕಾಗುತ್ತದೆ. ಆದರೆ ಹೆಂಡ ಇದ್ದಲ್ಲಿಯೇ ಹೋಗಿ ಕುಡಿಯುತ್ತಾರೆ. ಹೆಂಡದಷ್ಟು ಹಾಲು ಕುಡಿಯುವುದಿಲ್ಲ. ದಂಡ ಕೊಟ್ಟಷ್ಟು ದಾನ ಕೊಡುವುದಿಲ್ಲ.

| ರಂಭಾಪುರಿ ಶ್ರೀಗಳು