ಬೆಂಗಳೂರು ಹೀಗೆ ಬಂದು ಹಾಗೆ ಹೋಗುವ ವಿದ್ಯುತ್‌ಗಿಂತ ಜೀವನದಲ್ಲಿ ಕೊನೆಯತನಕ ಇರುವ ವಿದ್ವತ್ ಅನ್ನು ಸಂಪಾದಿಸಬೇಕು. ವಿದ್ಯುತ್ ಬೆಳಕು ಹೀಗೆ ಬಂದು ಹಾಗೆ ಹೋಗುತ್ತದೆ ಮತ್ತು ಶಾಕ್ ಹೊಡೆಯುತ್ತದೆ. ಆದರೆ, ವಿದ್ವತ್ತಿನ ಶಾಖ ಪ್ರಕಾಶನವಾಗಿ ಜೀವನವನ್ನು ಬೆಳಗುತ್ತದೆ ಎಂದು ಹಿರಿಯ ಸಂಶೋಧಕ ಡಾ. ಹಂಪ ನಾಗರಾಜಯ್ಯ ಬಣ್ಣಿಸಿದರು.

ಬಿಎಂಶ್ರೀ ಕಲಾಭವನದಲ್ಲಿ ಭಾನುವಾರ ಬಿಎಂಶ್ರೀ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಂ.ವಿ.ಸೀತಾರಾಮಯ್ಯ ಸ್ನಾತಕೋತ್ತರ ಕೇಂದ್ರ ಹಮ್ಮಿಕೊಂಡಿದ್ದ ‘ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ-2024’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಹಳೆಗನ್ನಡ, ನಡು ಮತ್ತು ಆಧುನಿಕ ಕನ್ನಡದಲ್ಲಿ ಸಾವಿರಾರು ಕೃತಿಗಳನ್ನು ಪ್ರಕಟಿಸುವ ಮೂಲಕ ಪ್ರಕಾಶ್ ಕಂಬತ್ತಳ್ಳಿ ಅವರು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡದ ಪ್ರಸಿದ್ಧ ಪ್ರಕಾಶಕರ ಶ್ರೇಣಿಯಲ್ಲಿ ನಿಲ್ಲುವ ಸ್ಥಾನವನ್ನು ಹೊಂದಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಾಕೃತ ಹಾಗೂ ಜೈನ ವಿದ್ವಾಂಸ ಡಾ. ಎಂ.ಎ, ಜಯಚಂದ್ರ, ನಾನು ಜೈನ ಧರ್ಮದಲ್ಲಿ ಹುಟ್ಟಿದ್ದರೂ ಪದವಿ ವ್ಯಾಸಂಗ ಮಾಡುವಾಗ ಅದರ ತಿರುಳನ್ನು ತಿಳಿದೆ ಎಂದರು.
ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಪಠ್ಯಕ್ರಮ ಹೇಗಿರಬೇಕೆಂಬ ಸಮಗ್ರ ಪಠ್ಯರಚನೆಯನ್ನು ಹಾಕಿಕೊಟ್ಟವರು ಬಿಎಂಶ್ರೀ. ಅವರ ಹೆಸರಿನಲ್ಲಿರುವ ಸಭಾಂಗಣದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ತುಂಬಾನೇ ಖುಷಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜೀವನದಲ್ಲಿ ಅಹಿಂಸೆಗಿಂತ ಹಿಂಸೆಯನ್ನು ಕಡಿಮೆ ಮಾಡಿಕೊಳ್ಳುವುದೇ ಧರ್ಮ. ನಮ್ಮ ಭಾವನೆಗಳಲ್ಲಿ ಹಿಂಸೆಯನ್ನು ಕಡಿಮೆ ಮಾಡಿಕೊಂಡಾಗ ಅರಿವು ಮೂಡುತ್ತದೆ. ಅದು ಆತ್ಮ, ಪರಮಾತ್ಮನೆಡೆಗೆ ಕರೆದೊಯ್ಯಲಿದೆ ಎಂದರು.
ಜೈನ ಧರ್ಮವು ಜೀವಪರವಾದದ್ದು. ಗಾಳಿ, ಅಗ್ನಿ, ಪ್ರಕೃತಿ ಎಲ್ಲೆಡೆಯೂ ಜೀವವಿರುತ್ತದೆ. ಹೀಗೆ ಜೀವವನ್ನು ರಕ್ಷಣೆ ಮಾಡುವುದೇ ಧರ್ಮವೆನ್ನುತ್ತದೆ ಜೈನ ಧರ್ಮ. ಜೀವ ಸಂಕುಲನವನ್ನು ಹೊಂದಬೇಕಾದರೆ, ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಮತ್ತು ದಲಿತ ಹೀಗೆ ಯಾವುದೇ ಶ್ರೇಣೀಕೃತ ವ್ಯವಸ್ಥೆಯಲ್ಲಿದ್ದರೂ, ಕರಿಯ-ಬಿಳಿಯ ಸೇರಿ ಯಾವುದೇ ವರ್ಣಭೇದದಲ್ಲಿದ್ದರೂ ಭಾವನಾತ್ಮಕವಾಗಿ ಯೋಚಿಸುವ ಗುಣವನ್ನು ಹೊಂದಬೇಕಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಭೈರಮಂಗಲ ರಾಮೇಗೌಡ ಮಾತನಾಡಿ, ಇಂದಿನ ಸಂಶೋಧನೆಯಲ್ಲಿನ ಹೆಚ್ಚಿನ ಕೃತಿಗಳಲ್ಲಿ ಹೊಸತನವಿಲ್ಲ. ಗಟ್ಟಿಗಿಂತ ಜೊಳ್ಳು ಜಾಸ್ತಿ ಸಿಗುತ್ತಿವೆ. ಆದರೆ, ಜಯಚಂದ್ರ ಅವರು ಸಾಹಿತ್ಯವು ಹೊಸತನದಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಗೆಯೇ ಹಂಪನಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯದಲ್ಲಿನ ಸಂಶೋಧನೆಯನ್ನು ತಿಳಿಸುವ ಕೆಲಸ ಮಾಡಿದರು. ಪಾಂಡಿತ್ಯವನ್ನು ಹೊಂದಿದ್ದರೂ ಓದುಗರಿಗೆ ಪಾಂಡಿತ್ಯವನ್ನು ತಿಳಿಸದೆ, ಸರಳ ಮಾರ್ಗದಲ್ಲಿ ಸಾಹಿತ್ಯ ರಚಿಸಿ ಸಾಮಾನ್ಯರಿಗೂ ಅರ್ಥವಾಗುವಂತಹ ಬರವಣಿಗೆ ಅವರದ್ದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕಾರ್ಯಪಾಲಕ ಅಭಿಯಂತರ ಕೆ.ಜೆ. ಪಾರ್ಶ್ವನಾಥ ಉಪಸ್ಥಿತರಿದ್ದರು.
ಬಹಳಷ್ಟು ಜನರಿಗೆ ಈ ಪ್ರಶಸ್ತಿಯು ಬರೀ ಜೈನರಿಗೆ ಮಾತ್ರವೆಂಬ ಗೊಂದಲವಿತ್ತು. ಆದರೆ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಾಧನೆಗೈದ ಎಲ್ಲ ಧರ್ಮೀಯರಿಗೂ ಈ ್ರಶಸ್ತಿಯು ಸಲ್ಲುತ್ತದೆ.
– ಪ್ರಕಾಶ್ ಕಂಬತ್ತಳ್ಳಿ, ಅಂಕಿತ ಪುಸ್ತಕ ಪ್ರಕಾಶಕ