ಹಿಂದು ಮುಸ್ಲಿಂ ಸಮನ್ವಯ ಕ್ಷೇತ್ರ

|ಪ್ರಶಾಂತ ರಿಪ್ಪನ್​ಪೇಟೆ

ಧರ್ಮದ ವಿಷಯದಲ್ಲಿ ಹುಟ್ಟುವ ವೈಷಮ್ಯಗಳಿಂದಾಗುವ ಅನಾಹುತಗಳು ಮತ್ತಾವುದೇ ವಿಷಯದಲ್ಲೂ ಆಗಿಲ್ಲವೆನ್ನಬಹುದು. ಕೇವಲ ವೇದಿಕೆಗಳಲ್ಲಿ ಭಾಷಣಕ್ಕೆ ಸೀಮಿತವಾದ ಭಾವೈಕ್ಯತೆ ಅಕ್ಷರಶಃ ಸಾಕಾರಗೊಂಡ ಅಪರೂಪದ ಕ್ಷೇತ್ರ ಹಣಗೆರೆಕಟ್ಟೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯು ರಾಜ್ಯ, ಹೊರರಾಜ್ಯಗಳ ಭಕ್ತರ ಗಮನ ಸೆಳೆದ ಕ್ಷೇತ್ರವಾಗಿದೆ.

ನಾಡಿನ ಹಲವೆಡೆ ಹಿಂದೂಗಳ ಪವಿತ್ರ ಕ್ಷೇತ್ರಗಳಿಗೆ ಮುಸ್ಲಿಂ ಬಂಧುಗಳು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹಾಗೆಯೇ ಮುಸ್ಲಿಂ ದರ್ಗಾಗಳಿಗೆ ನಡೆದುಕೊಳ್ಳುವ ಹಿಂದೂಗಳೂ ಇದ್ದಾರೆ. ಆದರೆ ಹಣಗೆರೆಕಟ್ಟೆಯಲ್ಲಿ ಒಂದೇ ಸೂರಿನಡಿ ಮುಸ್ಲಿಂ ಬಾಬಾರ ದರ್ಗಾ ಹಾಗೂ ಹಿಂದೂ ಗ್ರಾಮದೇವತೆಗಳಾದ ಭೂತಪ್ಪ, ಚೌಡೇಶ್ವರಿಯ ಸಾನ್ನಿಧ್ಯವಿದೆ. ಮುಸ್ಲಿಂ ಬಂಧುಗಳು ದರ್ಗಾದ ಮುಂದೆ ಪ್ರಾರ್ಥನೆ ಸಲ್ಲಿಸುವುದರ ಜತೆಗೆ ಭೂತಪ್ಪ ಚೌಡೇಶ್ವರಿಗೂ ಪೂಜೆ ಸಲ್ಲಿಸುತ್ತಾರೆ. ಅದರಂತೆ ಹಿಂದೂಗಳು ಬಾಬಾ ಸಮಾಧಿಗೂ ನಮಿಸುತ್ತಾರೆ. ಒಂದೇ ಕಟ್ಟಡದಲ್ಲಿ ಎರಡೂ ಸಮುದಾಯದ ಧಾರ್ವಿುಕ ವಿಧಿವಿಧಾನಗಳು ಯಾವುದೇ ಗೊಂದಲವಿಲ್ಲದಂತೆ ನಡೆಯುತ್ತವೆ.

ಪ್ರತಿದಿನ ರಾಜ್ಯ ಮತ್ತು ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಾನುವಾರ, ಗುರುವಾರ, ಅಮಾವಾಸ್ಯೆ, ಹುಣ್ಣಿಮೆಗಳಂದು ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ವರ್ಷಕೊಮ್ಮೆ ಏಪ್ರಿಲ್​ನಲ್ಲಿ ನಡೆಯುವ ಉರೂಸ್​ಗೆ ಲಕ್ಷಾಂತರ ಜನ ಆಗಮಿಸುತ್ತಾರೆ. ಅಂತೆಯೇ ರಂಜಾನ್ ಮಾಸದಲ್ಲಿ ಹಣಗೆರೆಕಟ್ಟೆಗೆ ಭಕ್ತರು ಹೆಚ್ಚು ಆಗಮಿಸುತ್ತಾರೆ.

ಮೊಳೆ, ಬೀಗ, ತ್ರಿಶೂಲದ ಹರಕೆ!

ಪ್ರತಿ ಕ್ಷೇತ್ರಗಳಲ್ಲೂ ಭಿನ್ನ ಆಚರಣೆಗಳಿರುತ್ತವೆ. ಅಂತೆಯೇ ಹಣಗೆರೆಕಟ್ಟೆಯ ಹರಕೆ ಮತ್ತು ಆಚರಣೆ ವಿಭಿನ್ನ, ಕುತೂಹಲಕಾರಿ. ಇಲ್ಲಿ ಬಾನಾಮತಿಯಂತಹ ವಾಮಾಚಾರಕ್ಕೆ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಈ ಕಾರಣಕ್ಕಾಗಿ ದೂರ ದೂರದಿಂದ ಬರುವ ಭಕ್ತರು; ಇಲ್ಲಿನ ಸರಪಳಿಗೆ ಬೀಗ ಹಾಕುವುದು, ಚೀಟಿ ಅಥವಾ ತಗಡಿನಲ್ಲಿ ತಮ್ಮ ಹರಕೆಯನ್ನು ಬರೆದು ದೇವರ ಮುಂದೆ ಇಟ್ಟು ಮೊಳೆ ಹೊಡೆಯುವುದು ಕಂಡುಬರುತ್ತದೆ. ತಮ್ಮ ವಿರುದ್ಧ ಯಾವುದೇ ವಾಮಾಚಾರ ಅಥವಾ ಕಿರುಕುಳಗಳನ್ನು ನೀಡಿದವರಿದ್ದರೆ ಅವರ ಬಾಯಿಗೆ ಬೀಗ ಹಾಕಿದಂತೆ ಎಂಬುದು ಇದರ ಸಂಕೇತವಂತೆ.

ಹರಕೆಚೀಟಿಯಲ್ಲಿ ತಮ್ಮ ಬೇಡಿಕೆಯನ್ನು ಬರೆದು ಮೊಳೆ ಹೊಡೆಯುವುದರಿಂದ ತೊಂದರೆಗಳು ಪರಿಹಾರವಾಗುತ್ತವೆ ಎನ್ನಲಾಗುತ್ತದೆ. ಭಕ್ತರು ಹೀಗೆ ಹಾಕಿದ ಬೀಗಗಳ ಸಂಖ್ಯೆ ಇಲ್ಲಿ ಲಕ್ಷ ಮೀರಿವೆ. ತಮ್ಮ ಕೋರಿಕೆ ಈಡೇರಿದ ನಂತರ ಬಂದು ಒಂದು ಬೀಗವನ್ನು ತೆಗೆದು, ಮೊಳೆಯನ್ನು ಕಿತ್ತು ದೇವರಿಗೆ ತ್ರಿಶೂಲವನ್ನು ಅರ್ಪಿಸಿ ಹರಕೆ ತೀರಿಸುವ ಪದ್ಧತಿ ಇದೆ. ಆಂಧ್ರ, ತಮಿಳುನಾಡು, ಕೇರಳ, ದೂರದ ದೆಹಲಿ ಹಾಗೂ ಜಮ್ಮುಕಾಶ್ಮೀರದಿಂದಲೂ

ಭಕ್ತರು ಇಲ್ಲಿಗೆ ಬಂದು ಪರಿಹಾರ ಪಡೆದ ನಿದರ್ಶನಗಳಿವೆ.

ಕ್ಷೇತ್ರದ ಇತಿಹಾಸ: ಹಣಗೆರೆಕಟ್ಟೆಯ ಹಿನ್ನೆಲೆಗೆ ಸಂಬಂಧಿಸಿದಂತೆ ಯಾವುದೇ ಲಿಖಿತ ದಾಖಲೆಗಳು ಲಭ್ಯವಿಲ್ಲವಾದರೂ ಹಿರಿಯರ ಮಾತಿನಂತೆ ಸುಮಾರು 4-5 ಶತಮಾನಗಳ ಇತಿಹಾಸವಿದೆ. ದಟ್ಟ ಅರಣ್ಯ ಪ್ರದೇಶವಾಗಿದ್ದ ಈ ಸ್ಥಳದಲ್ಲಿರುವ ಕೆರೆಯ ಸಮೀಪದಲ್ಲಿ ಸೂಫಿಪರಂಪರೆಗೆ ಸೇರಿದ ಸೈಯದ್ ಸಾದತ್ ಬಾಬಾ ಸುದೀರ್ಘ ಕಾಲ ಅನುಷ್ಠಾನ ಮಾಡಿದ್ದರಂತೆ. ಆ ಸಂದರ್ಭದಲ್ಲಿ ಈ ಕ್ಷೇತ್ರದೇವತೆಗಳೂ ಸಹೋದರರೂ ಆದ ಭೂತರಾಜ ಮತ್ತು ಚೌಡೇಶ್ವರಿದೇವಿಯರು ಫಕೀರರ ಅನುಷ್ಠಾನ ಮೆಚ್ಚಿ ಅವರ ಸೇವೆ ಮಾಡಿದ್ದರಂತೆ. ಬಾಬಾ ಕಾಲವಾದ ನಂತರ ಭೂತರಾಜ ಮತ್ತು ಚೌಡೇಶ್ವರಿ ದೇವರ ಕಟ್ಟೆಯ ಪಕ್ಕದಲ್ಲಿಯೇ ಅವರ ಸಮಾಧಿ ನಿರ್ವಿುಸಲಾಯಿತು. ಅಂದಿನಿಂದ ಇದೊಂದು ಭಾವೈಕ್ಯತೆಯ ಕ್ಷೇತ್ರವಾಗಿ ಪ್ರಸಿದ್ಧವಾಗಿದೆ. ಎರಡೂ ಧರ್ಮಗಳ ಸದಸ್ಯರು ಆಡಳಿತ ಸಮಿತಿಯಲ್ಲಿದ್ದು ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ಮೂಲಭೂತ ಸೌಲಭ್ಯ ಕಲ್ಪಿಸುವ ಅಗತ್ಯವಿದೆ.

ಹೋಗುವ ಮಾರ್ಗ

ಬೆಂಗಳೂರಿನಿಂದ 305 ಕಿ.ಮೀ. ದೂರವಿದ್ದು, ಬಿ.ಎಚ್.ರಸ್ತೆಯ ಮೂಲಕ ಶಿವಮೊಗ್ಗ ಹೋಗಿ, ಅಲ್ಲಿಂದ ಆಯನೂರು ಮಾರ್ಗವಾಗಿ 35 ಕಿ.ಮೀ. ಕ್ರಮಿಸಿ ಹಣಗೆರೆಕಟ್ಟೆಯನ್ನು ತಲುಪಬಹುದು.

Leave a Reply

Your email address will not be published. Required fields are marked *