ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ

ಕಳಸ: ಜಾನುವಾರುಗಳ ಕಳವು, ಪಟ್ಟಣದ ಠಾಣೆಗೆ ಪಿಎಸ್​ಐ ನೇಮಕ, ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ, ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಮದ್ಯ ಮಾರಾಟ. ಹೀಗೆ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಕೊಪ್ಪ ಡಿವೈಎಸ್ಪಿ ಜಹಗೀರ್​ದಾರ್ ಅವರ ಬಳಿ ಹೇಳಿಕೊಂಡರು.

ಕಳಸದಲ್ಲಿ ಐಶಾರಾಮಿ ಕಾರುಗಳಲ್ಲಿ ಬಂದು ಜಾನುವಾರು ಕಳವು ಮಾಡುತ್ತಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪಿಎಸ್​ಐ ಇಲ್ಲದೆ ಒಂಭತ್ತು ತಿಂಗಳಾಗಿದೆ. ಶೀಘ್ರ ನೇಮಕ ಮಾಡಬೇಕು. ರಸ್ತೆಯ ಎರಡೂ ಬದಿ ವಾಹನ ನಿಲ್ಲಿಸುವುದರಿಂದ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಅಹವಾಲು ಹೇಳಿಕೊಂಡರು.

ಆಟೋಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಕೆಲವರಲ್ಲಿ ಅಗತ್ಯ ದಾಖಲೆಗಳೇ ಇಲ್ಲ. ವೇಗವಾಗಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸ್ ಠಾಣೆ ಸಮೀಪ ಇದ್ದ ಸಿಸಿ ಕ್ಯಾಮರಾ ಕೆಟ್ಟುಹೋಗಿ ವರ್ಷಗಳೇ ಕಳೆದಿವೆ. ಕಳೆದ ಜನಸಂಪರ್ಕ ಸಭೆಯಲ್ಲಿ ಒಂದೇ ದಿನದಲ್ಲಿ ಸರಿಪಡಿಸುತ್ತೇವೆ ಎಂದು ಹೇಳಿ ವರ್ಷವಾದರೂ ಸರಿಪಡಿಸಿಲ್ಲ ಎಂದು ದೂರಿದರು.

ಅಹವಾಲು ಆಲಿಸಿ ಮಾತನಾಡಿದ ಡಿವೈಎಸ್ಪಿ, ಜನರಿಗೆ ಕಾನೂನಿನ ಅರಿವು ಇದ್ದರೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಪರಾಧಗಳನ್ನು ತಡೆಗಟ್ಟಲು ಪೊಲೀಸರ ಜತೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *