ಭಟ್ಕಳ: ತಾಲೂಕಿನ ಹಾಡವಳ್ಳಿಯ ಹಿರೇಬೀಳು ಮಜಿರೆಯಲ್ಲಿ ಭಾರಿ ಗಾಳಿಮಳೆಗೆ ಮನೆ, ಅಡಕೆ ತೋಟ ಹಾನಿಯಾದ ಪ್ರದೇಶವನ್ನು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವೀಕ್ಷಿಸಿದರು.
ಹಲ್ಯಾಣಿಯ ತಿಮ್ಮಯ್ಯ ನಾರಾಯಣ ನಾಯ್ಕ, ಬುಡ್ಡ ಮಂಗಳ ಗೊಂಡ, ಅಣ್ಣಪ್ಪ ನಾರಾಯಣ ನಾಯ್ಕ, ಗಣಪತಿ ನಾರಾಯಣ ನಾಯ್ಕ, ನಾಗೇಶ ನಾರಾಯಣ ನಾಯ್ಕ, ದೇವರಾಜ ಗೊಂಡ ಅವರ ಮನೆಗೆ ಭೇಟಿ ನೀಡಿ ಹಾನಿ ಪರಿಶೀಲಿಸಿ ಮನೆಯವರಿಗೆ ಸಾಂತ್ವಾನ ಹೇಳಿದರು.
ಭಾರಿ ಮಳೆಯಿಂದ ಮನೆಗಳಿಗೆ ಹಾನಿಯಾಗಿರುವುದು, ತೋಟದಲ್ಲಿ ಅಡಕೆ, ತೆಂಗು ಮುಂತಾದ ಮರಗಳು ಬಿರುಗಾಳಿಗೆ ತುಂಡುತುಂಡಾಗಿ ಬಿದ್ದಿರುವುದನ್ನು ಸಚಿವರು ವೀಕ್ಷಿಸಿದರು.
ಮನೆ ಹಾನಿಯಾದವರ ಖಾತೆಗೆ ಸೋಮವಾರವೇ 1 ಲಕ್ಷ ರೂ. ಪರಿಹಾರವನ್ನು ಜಮಾ ಮಾಡಲಾಗುವುದು. ಜತೆಗೆ ಸರ್ಕಾರದಿಂದ ಹೊಸ ಮನೆ ಮಂಜೂರಿ ಮಾಡಿಸಲಾಗುತ್ತದೆ. ಅಡಕೆ ತೋಟ ಹಾನಿಯಾದ ಬಗ್ಗೆ ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ಹಾನಿಯ ಬಗ್ಗೆ ನಿಖರ ವರದಿ ನೀಡಿದ ಬಳಿಕ ಪರಿಹಾರ ವಿತರಿಸಲಾಗುವುದು ಎಂದರು.
ಕುಂಟವಾಣಿಯಲ್ಲಿ ಗುಡ್ಡದಿಂದ ಜಾರಿ ಬಂದ ಬೃಹತ್ ಗಾತ್ರದ ಬಂಡೆ ವೀಕ್ಷಿಸಿದರು. ಹಾಡವಳ್ಳಿ, ಕೋಣಾರ, ಬೆಳಕೆ, ಯಲ್ವಡಿಕವೂರು, ಮಾವಿನಕುರ್ವೆಯ ಕರಿಕಲ್ಗೆ ಭೇಟಿ ನೀಡಿ ಈ ಭಾಗದಲ್ಲಿ ಮಳೆಯಿಂದ ಮನೆ ಹಾನಿಯಾದವರಿಗೆ ಪರಿಹಾರದ ಚೆಕ್ ವಿತರಿಸಿದರು.
ಸಹಾಯಕ ಆಯುಕ್ತೆ ಡಾ. ನಯನಾ, ತಾಪಂ. ಪ್ರಭಾರಿ ಇಒ, ಬಿಇಒ ವಿ.ಡಿ. ಮೊಗೇರ, ತಹಸೀಲ್ದಾರ್ ನಾಗರಾಜ ನಾಯ್ಕಡ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೀಳಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಹಾಡವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ ಶೆಟ್ಟಿ, ಪಿಡಿಒ ಇದ್ದರು.