ಬೆಳಗಾವಿ: ಶ್ರೀಮಂತರು, ಉಳ್ಳವರು ಧನ ಸಹಾಯ ಮಾಡದ ಪ್ರಸ್ತುತ ಕಾಲದಲ್ಲಿ ಇಲ್ಲೊಬ್ಬ ಜನರೇಟರ್ ರಿಪೇರಿ ಮಾಡುವ ಉದ್ಯೋಗಿ ಕರೊನಾ ವೈರಸ್ ಸಂತ್ರಸ್ತರಿಗಾಗಿ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 21 ಸಾವಿರ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ನಗರದ ಬಾಪಟ್ ಗಲ್ಲಿ ನಿವಾಸಿ ಮಹೇಶ ಪಾವಲೆ ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರ ಮೂಲಕ ಪ್ರಧಾನಿಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ವೈದ್ಯರು, ಯೋಧರು ಹಾಗೂ ಪೊಲೀಸರು ಕರೊನಾ ವೈರಸ್ ಕಿತ್ತೊಗೆಯುವುದಕ್ಕೆ ಪ್ರಾಣ ಪಣಕ್ಕಿಟ್ಟಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನೂ ಸಹ ಭಾಗಿಯಾಗಿ ದೇಶಕ್ಕೆ ನೆರವಾಗಬೇಕು ಎನ್ನುವ ಉದ್ದೇಶದಿಂದ ದುಡಿದ ಹಣವನ್ನು ದೇಣಿಗೆ ನೀಡಿದ್ದೇನೆ. ಇದು ನನಗೆ ಸೇವೆ ಮಾಡುವುದಕ್ಕೆ ಸಿಕ್ಕ ಅವಕಾಶ ಎಂದು ಭಾವಿಸಿರುವೆ. ಚಿಕ್ಕಂದಿನಿಂದಲೇ ಸೈನ್ಯ ಸೇರಿ ದೇಶಸೇವೆ ಮಾಡುವ ಆಸೆ ಇತ್ತು ಆದರೆ, ಈ ಕನಸು ಕೈ ಗೂಡಲಿಲ್ಲ. ಜನರೇಟರ್ ಮೆಕಾನಿಕ್ ಆಗಿಯೂ ದೇಣಿಗೆ ನೀಡಿದ್ದು, ಇದರಿಂದ ದೇಶ ಸೇವೆಯಲ್ಲಿ ಭಾಗಿಯಾಗಿದ್ದೇನೆ ಎಂದು ಎನಿಸುತ್ತಿದೆ ಎಂದರು. ಮಹೇಶ ಅವರ ಪತ್ನಿ ಜಯಲಕ್ಷ್ಮೀ ಪಾವಲೆ ಇದ್ದರು.