Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಬಿಸಿಸಿಐಗೆ ರಿಲೀಫ್

Friday, 10.08.2018, 3:04 AM       No Comments

ನವದೆಹಲಿ: ದೇಶದ ಕ್ರಿಕೆಟ್ ಆಡಳಿತದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದ್ದ ಲೋಧಾ ಸಮಿತಿ ಶಿಫಾರಸಿನ ಕೆಲವೊಂದು ನಿಷ್ಠುರ ಅಂಶಗಳನ್ನು ಸುಪ್ರೀಂ ಕೋರ್ಟ್ ಕಡೆಗೂ ಕೈಬಿಟ್ಟಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರ ಮೃದುಧೋರಣೆ ತಳೆದಿರುವ ಸುಪ್ರೀಂ ಕೋರ್ಟ್, ಪರಿಷ್ಕೃತ ಕರಡು ಸಂವಿಧಾನಕ್ಕೆ ಗುರುವಾರ ಒಪ್ಪಿಗೆ ನೀಡಿದೆ. ಪ್ರಮುಖವಾಗಿ ಒಂದು ರಾಜ್ಯಕ್ಕೆ ಒಂದು ಮತ ನಿಯಮ ರದ್ದು ಮತ್ತು ಕೂಲಿಂಗ್ ಆಫ್ ನಿಯಮದಲ್ಲಿ ಸಡಿಲಿಕೆ ಮಾಡಲು ಒಪ್ಪಿಕೊಳ್ಳುವ ಮೂಲಕ ಬಿಸಿಸಿಐಯನ್ನು ನಿರಾಳಗೊಳಿಸಿದೆ. ಲೋಧಾ ಸಮಿತಿಯ ಶಿಫಾರಸಿನಲ್ಲಿದ್ದ ಒಂದು ರಾಜ್ಯಕ್ಕೆ ಒಂದೇ ಮತ ಹಾಗೂ ಒಂದು ಅವಧಿಯ ಅಧಿಕಾರದ ಬಳಿಕ ಇದ್ದ 3 ವರ್ಷಗಳ ಕೂಲಿಂಗ್ ಆಫ್ ಕಾಲಾವಧಿಗೆ ಬಿಸಿಸಿಐನಿಂದ ಪ್ರಬಲ ವಿರೋಧ ವ್ಯಕ್ತವಾಗಿದ್ದರಿಂದ, ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ರಚಿಸಿದ್ದ ಬಿಸಿಸಿಐನ ಕರಡು ಸಂವಿಧಾನದಿಂದ ಸುಪ್ರೀಂ ಕೋರ್ಟ್ ಈ ಅಂಶಗಳನ್ನು ತೆಗೆದು ಹಾಕಿದೆ. ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಸತತ ಎರಡು ಅವಧಿಕಾರಾವಧಿ ಪೂರೈಸಿದ ಬಳಿಕ 3 ವರ್ಷಗಳ ಕೂಲಿಂಗ್ ಆಫ್ ಅವಧಿ ತೆಗೆದುಕೊಳ್ಳಬೇಕಿದೆ. ಇನ್ನು ಒಂದು ರಾಜ್ಯಕ್ಕೆ ಒಂದೇ ಮತ ಅಂಶವನ್ನು ತೆಗೆದುಹಾಕಿರುವ ಕಾರಣ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿರುವ ಕ್ರಿಕೆಟ್ ಸಂಸ್ಥೆಗಳು ನಿರಾಳ ಕಂಡಿವೆ. ಸುಪ್ರೀಂ ಕೋರ್ಟ್ ನ ಈ ನಿರ್ಧಾರದಿಂದಾಗಿ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ), ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಮಹಾರಾಷ್ಟ್ರದಿಂದ ಬಿಸಿಸಿಐನ ಪೂರ್ಣ ಸದಸ್ಯತ್ವ ಉಳಿಸಿಕೊಳ್ಳಲಿದ್ದರೆ, ಗುಜರಾತ್​ನಿಂದ ಸೌರಾಷ್ಟ್ರ ಹಾಗೂ ಬರೋಡ ಬಿಸಿಸಿಐನಲ್ಲಿ ಉಳಿಯಲಿದೆ. ಲೋಧಾ ಶಿಫಾರಸಿನ ಪ್ರಕಾರ ರಾಜ್ಯಗಳಲ್ಲದ ಅಸೋಸಿಯೇಷನ್​ಗಳಾದ ರೈಲ್ವೇಸ್, ಸರ್ವೀಸಸ್, ಇಂಡಿಯನ್ ಯುನಿವರ್ಸಿಟೀಸ್, ನ್ಯಾಷನಲ್ ಕ್ರಿಕೆಟ್ ಕ್ಲಬ್ (ಕೋಲ್ಕತ) ಹಾಗೂ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಪೂರ್ಣ ಸದಸ್ಯತ್ವವನ್ನು ತೆಗೆದುಹಾಕಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ರೈಲ್ವೇಸ್, ಸರ್ವೀಸಸ್ ಹಾಗೂ ಯುನಿವರ್ಸಿಟೀಸ್​ಗಳಿಗೆ ಪೂರ್ಣ ಸದಸ್ಯತ್ವ ಸಂಸ್ಥೆಗಳಾಗಿ ಉಳಿದುಕೊಳ್ಳಲು ಅವಕಾಶ ನೀಡಿದ್ದು, ಮತದಾನ ಹಕ್ಕು ಇರಲಿದೆ. –ಪಿಟಿಐ/ಏಜೆನ್ಸೀಸ್

ಒಂದು ರಾಜ್ಯ, ಒಂದು ಮತ ನಿಯಮ ರದ್ದು

2 ಅವಧಿ ಬಳಿಕ ಕೂಲಿಂಗ್ ಆಫ್ ಬಿಸಿಸಿಐನ ಬಹುಪಾಲು ಅಧಿಕಾರಿಗಳು ಲೋಧಾ ಸಮಿತಿಯ ಮುಖ್ಯ ಅಂಶವಾಗಿದ್ದ ಕೂಲಿಂಗ್ ಆಫ್ ಅವಧಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ಸುಪ್ರೀಂ ಕೋರ್ಟ್ ಎರಡು ಅವಧಿಯ ಬಳಿಕವಷ್ಟೇ ಕೂಲಿಂಗ್ ಆಫ್ ಕಡ್ಡಾಯ ಮಾಡಿರುವುದರಿಂದ, 6 ವರ್ಷಗಳ ಕಾಲ ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅಧಿಕಾರ ಮಾಡಬಹುದು. ಆದರೆ, ವಯೋಮಿತಿ ಹಾಗೂ ಅಧಿಕಾರ ಕಾಲಾವಧಿಯ ಬಗ್ಗೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಲೋಧಾ ಸಮಿತಿಯ 70 ವರ್ಷಕ್ಕಿಂತ ಮೇಲ್ಪಟ್ಟವರು ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಹೇಳಿದ್ದಲ್ಲದೆ, ಒಟ್ಟಾರೆ 9 ವರ್ಷ ಅಧಿಕಾರ ಅನುಭವಿಸಬಹುದು ಎಂದು ಹೇಳಿತ್ತು.

ಮುಂದಿನ ಪ್ರಕ್ರಿಯೆ ಏನು?

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ನೂತನ ಸಂವಿಧಾನವನ್ನು ಮುಂದಿನ ನಾಲ್ಕು ವಾರಗಳ ಒಳಗಾಗಿ ತಮಿಳುನಾಡು ರಿಜಿಸ್ಟ್ರಾರ್ ಆಫ್ ಸೊಸೈಟೀಸ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದೆ. ಆ ಬಳಿಕ ಮುಂದಿನ 30 ದಿನಗಳಲ್ಲಿ ಬಿಸಿಸಿಐನ ಸದಸ್ಯ ಸಂಸ್ಥೆಗಳು ಹೊಸ ಸಂವಿಧಾನದ ಅನ್ವಯ ಕಾರ್ಯನಿರ್ವಹಿಸುವುದಾಗಿ ಆಡಳಿತಾಧಿಕಾರಿ ಸಮಿತಿಗೆ ಹೇಳಬೇಕಿದೆ ಎಂದು ಪೀಠ ತಿಳಿಸಿದೆ. ಯಾವುದಾದರೂ ರಾಜ್ಯ ಸಂಸ್ಥೆ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದಲ್ಲಿ, ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿರುತ್ತದೆ ಎಂದು ಕೋರ್ಟ್ ತಿಳಿಸಿದೆ.

ಏನಿದು ಲೋಧಾ ಸಮಿತಿ

2013ರ ಐಪಿಎಲ್​ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದ್ದು ಇಷ್ಟೆಲ್ಲ ಬದಲಾವಣೆಗೆ ಕಾರಣ. ಅಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ಕೆಲ ಆಟಗಾರರು ಹಾಗೂ ಮಾಲೀಕರೇ ಇದರಲ್ಲಿ ಭಾಗಿಯಾಗಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರಿಂದ ಅದರ ತನಿಖೆಗಾಗಿ ಮುಕುಲ್ ಮುದ್ಗಲ್ ಸಮಿತಿಯನ್ನು ರಚನೆ ಮಾಡಿ ಶಿಕ್ಷೆ ನೀಡುವ ಅಧಿಕಾರ ವಿಧಿಸಿತ್ತು. ಅದರನ್ವಯ ಆಟಗಾರರು ಹಾಗೂ ತಂಡಗಳಿಗೆ ಶಿಕ್ಷೆ ವಿಧಿಸಿದ್ದ ಸಮಿತಿ, ಬಿಸಿಸಿಐನಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದು ತಿಳಿಸಿತ್ತು. ಇದನ್ನು ಮನಗಂಡ ಸುಪ್ರೀಂ ಕೋರ್ಟ್ 2015ರ ಜನವರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್​ಎಂ ಲೋಧಾ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಬಿಸಿಸಿಐನಲ್ಲಿ ಆಗಬೇಕಾಗಿರುವ ಬದಲಾವಣೆಯ ಕುರಿತು ವರದಿ ಸಿದ್ಧಪಡಿಸುವಂತೆ ಹೇಳಿತ್ತು. 2016ರ ಜನವರಿಯಲ್ಲಿ ಲೋಧಾ ಸಮಿತಿ ತನ್ನ ಶಿಫಾರಸುಗಳ ವರದಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಕೋರ್ಟ್, 2016ರ ಜುಲೈ 18ರಂದು ಇದನ್ನು ಮಂಡಳಿಯಲ್ಲಿ ಜಾರಿ ಮಾಡುವಂತೆ ಹೇಳಿತ್ತು. ಆದರೆ, ಬಿಸಿಸಿಐನ ನಿರಾಸಕ್ತಿಯಿಂದಾಗಿ 2017ರ ಜನವರಿಯಲ್ಲಿ ಸುಪ್ರೀಂ ಕೋರ್ಟ್, ಕ್ರಿಕೆಟ್ ಆಡಳಿತಾಧಿಕಾರಿ ಸಮಿತಿಯನ್ನು (ಸಿಒಎ) ಲೋಧಾ ಸಮಿತಿ ಶಿಫಾರಸು ಜಾರಿ ಮಾಡುವ ಕಾರ್ಯಕ್ಕಾಗಿ ನೇಮಿಸಿ, 6 ತಿಂಗಳ ಗಡುವು ನೀಡಿತ್ತು.

ಹೊಸ ಸಂವಿಧಾನಕ್ಕೆ ಒಪ್ಪಿಗೆ ಸಿಕ್ಕಿರುವುದರಿಂದ, ಕೊನೆಗೂ ಯಾವ ದಾರಿಯಲ್ಲಿ ಸಾಗಬೇಕು, ಚುನಾವಣೆ ಹೇಗೆ ನಡೆಸಬೇಕು ಎನ್ನುವ ಕುರಿತು ಮಾರ್ಗನಕ್ಷೆ ಸಿಕ್ಕಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಸಮಯದ ಗಡುವನ್ನೂ ನೀಡಿದೆ. ಕೋರ್ಟ್ ನೀಡಿದ ಡೆಡ್​ಲೈನ್ ಒಳಗಾಗಿ ರಾಜ್ಯ ಸಂಸ್ಥೆಗಳು ಸಂವಿಧಾನವನ್ನು ಬದಲಾಯಿಸಿಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಸಿಒಎ ಮತ್ತೆ ಕೋರ್ಟ್ ಮೆಟ್ಟಿಲೇರಲಿದೆ.

| ವಿನೋದ್ ರಾಯ್ ಸಿಒಎ ಮುಖ್ಯಸ್ಥ

ಆಯ್ಕೆಗಾರರ ಸಂಖ್ಯೆ ಐದಕ್ಕೆ ಏರಿಕೆ

ಲೋಧಾ ಶಿಫಾರಸಿನಂತೆ 3ಕ್ಕೆ ಇಳಿದಿದ್ದ ರಾಷ್ಟ್ರೀಯ ಆಯ್ಕೆಗಾರರ ಸಂಖ್ಯೆ ಮತ್ತೆ 5ಕ್ಕೆ ಏರಲಿದೆ. ಜತೆಗೆ ಟೆಸ್ಟ್ ಕ್ರಿಕೆಟ್ ಆಡಿದವರಷ್ಟೇ ಆಯ್ಕೆಗಾರರಾಗಬೇಕೆಂಬ ನಿಯಮವನ್ನೂ ಕೈಬಿಡಲಾಗಿದ್ದು, 7 ಟೆಸ್ಟ್, 10 ಏಕದಿನ ಅಥವಾ 30 ಪ್ರಥಮ ದರ್ಜೆ ಪಂದ್ಯ ಆಡಿದವರಿಗೆ ಆಯ್ಕೆಗಾರರಾಗಲು ಅವಕಾಶ ಕಲ್ಪಿಸಲಾಗಿದೆ.

ತಮಿಳುನಾಡು ರಿಜಿಸ್ಟ್ರಾರ್ ಆಫ್ ಸೊಸೈಟೀಸ್

ಭಾರತದಲ್ಲಿ ಕ್ರಿಕೆಟ್ ಆಡಳಿತವನ್ನು ನೋಡಿ ಕೊಳ್ಳುವ ಮುಖ್ಯ ಸಂಸ್ಥೆಯಾಗಿರುವ ಬಿಸಿಸಿಐ ಆರಂಭವಾಗಿದ್ದು 1928ರಲ್ಲಿ. ಆ ವರ್ಷದ ಡಿಸೆಂಬರ್​ನಲ್ಲಿ ತಮಿಳುನಾಡು ರಿಜಿಸ್ಟ್ರಾರ್ ಆಫ್ ಸೊಸೈಟೀಸ್​ನಲ್ಲಿ ಆರು ಸದಸ್ಯ ಸಂಸ್ಥೆಗಳೊಂದಿಗೆ ಒಂದು ಸೊಸೈಟಿ ರೂಪದಲ್ಲಿ ಬಿಸಿಸಿಐ ನೋಂದಣಿ ಆಗಿತ್ತು.

Leave a Reply

Your email address will not be published. Required fields are marked *

Back To Top