ಪಾಳುಬಿದ್ದ ಗಾಂಧಿ ಸ್ಮಾರಕ ಭವನ

ಬಸವರಾಜ ಸಿಂದಗಿಮಠ ಗುಳೇದಗುಡ್ಡ: ಸ್ಥಳೀಯ ಗಾಂಧಿ ಸ್ಮಾರಕ ಭವನದ ಪುನರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಗತಿಸಿವೆ. ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮದ ಸಂಭ್ರಮದಲ್ಲಿರಬೇಕಾದ ಕಟ್ಟಡ ಇಂದು ಹಾಳುಕೊಂಪೆಯಾಗಿದ್ದು, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ್ಕೆ ಸಾಕ್ಷಿಯಾಗಿ ನಿಂತಿದೆ.

ಮಹಾತ್ಮ ಗಾಂಧಿ ನಿಧನದ ನಂತರ ನಗರದ ಪ್ರವಾಸಿ ಮಂದಿರದ ಎದುರಿಗೆ 1957ರಲ್ಲಿ ಗಾಂಧೀಜಿ ಸ್ಮಾರಕ ಭವನ ನಿರ್ವಿುಸಲಾಗಿದ್ದು, ಈ ಕಟ್ಟಡಕ್ಕೆ ಸಾರ್ವಜನಿಕರು ಗಾಂಧಿ ಚೌಕ್ ಎಂದೇ ಕರೆಯುತ್ತಿದ್ದರು. ಇಲ್ಲಿ ಮಹಾತ್ಮ ಗಾಂಧೀಜಿ ಭವನ ಹಾಗೂ ಮಕ್ಕಳ ಉದ್ಯಾನ ಇತ್ತು.

ವರ್ಷಗಳು ಕಳೆದಂತೆ ಕಟ್ಟಡದ ಗೋಡೆಗಳು ಶಿಥಿಲವಾದವು. ಸ್ಥಳೀಯ ಪುರಸಭೆ ಗೋಡೆಗಳನ್ನು ಕೆಡವಿ ಸುಮಾರು ಕೋಟಿ ರೂ. ವೆಚ್ಚದಲ್ಲಿ ಹಳೆಯ ಕಟ್ಟಡ ಪೂರ್ತಿ ತೆರವುಗೊಳಿಸಿ ಹೊಸದಾಗಿ ಗಾಂಧಿ ಸಭಾಭವನ ನಿರ್ವಿುಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಎರಡು ವರ್ಷವಾದರೂ ಸಭಾಭವನ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತು ಹಾಳುಕೊಂಪೆಯಂತಾಗಿದೆ.

ಪುರಸಭೆ ಕಟ್ಟಡಕ್ಕೆ 49 ಲಕ್ಷ ರೂ. ಅನುದಾನ ತೆಗೆದಿರಿಸಿತ್ತು. ಮುಖ್ಯಮಂತ್ರಿಗಳ ನಿಧಿಯಿಂದ 50 ಲಕ್ಷ ರೂ. ಅನುದಾನ ಬಂದಿದ್ದರೂ ಉಪಯೋಗ ಮಾಡಿಕೊಳ್ಳದೆ ಇರುವುದರಿಂದ ಆ ಹಣ ಹಾಗೆಯೇ ಉಳಿದುಕೊಂಡಿದೆ. ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಟ್ಟದ ಸುತ್ತಲಿನ ವಿಶಾಲ ಭಾಗದಲ್ಲಿ ಮುಳ್ಳುಕಂಟಿಗಳು, ಕಟ್ಟಡ ಅವಶೇಷಗಳು ತುಂಬಿಕೊಂಡಿದ್ದು, ಕುಡುಕರು ಹಾಗೂ ಹಂದಿಗಳ ಆಶ್ರಯ ತಾಣವಾಗಿದೆ. ಇನ್ನು ಕೆಲವರಿಗೆ ಬಯಲು ಶೌಚಗೃಹವಾಗಿ ಮಾರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈಗ ಈ ಕ್ಷೇತ್ರದ ಶಾಸಕರಾಗಿದ್ದು, ಅರ್ಧಕ್ಕೆ ನಿಂತಿರುವ ಗಾಂಧಿ ಭವನವನ್ನು ಪೂರ್ಣಗೊಳಿಸುತ್ತಾರೆ ಎಂದು ನಗರದ ಜನತೆ ಕಾಯುತ್ತಿದ್ದಾರೆ.

ಕಟ್ಟಡ ಕಟ್ಟಲು ಪ್ರಾರಂಭವಾಗಿ ಎರಡು ವರ್ಷವಾಗಿದೆ. ಕಾಮಗಾರಿ ಅರ್ಧಕ್ಕೆ ನಿಂತು ಬಾರಾಕಮಾನಿನಂತೆ ಕಾಣಿಸುತ್ತಿದೆ. ಬೇರೆ ಊರುಗಳಿಂದ ಆಗಮಿಸುವ ಪ್ರವಾಸಿಗರು ಈ ಕಟ್ಟಡ ಯಾವುದೆಂದು ಕೇಳುತ್ತಿದ್ದಾರೆ. ಹಿಂದೆ ಇಲ್ಲಿ ಅನೇಕ ಸಾಹಿತ್ಯ ಚಟುವಟಿಕೆಗಳು ಹಾಗೂ ನವರಾತ್ರಿ ಉತ್ಸವ ನಡೆಯುತ್ತಿದ್ದವು. ಆದರೀಗ ರಾತ್ರಿವೇಳೆ ಅನೈತಿಕ ಚಟುವಟಿಕೆ ನಡೆಯುತ್ತಿವೆ.

| ಅಶೋಕ ಹೆಗಡೆ ಪುರಸಭೆ ಮಾಜಿ ಸದಸ್ಯ

ಊರಿಗೆ ಇದೊಂದೇ ಉದ್ಯಾನವಾಗಿತ್ತು. ಆಧುನೀಕರಣಗೊಳಿಸುತ್ತೇವೆ ಎಂದು ಹೇಳಿ ಹಾಳುಮಾಡಿದ್ದಾರೆ. ಗಾಂಧೀಜಿ ವಿರೋಧಿಸಿದ್ದ ಮದ್ಯಪಾನ, ಧೂಮಪಾನ ತಾಣವಾಗಿರುವುದು ದುರ್ದೈವ. ಗಾಂಧಿ ಭವನವನ್ನು ಬೇರೆಡೆ ನಿರ್ವಿುಸಿ, ಇದನ್ನು ಉದ್ಯಾನವಾಗಿ ಉಳಿಸಿದ್ದರೆ ಚೆನ್ನಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.

| ಈಶ್ವರ ಕಂಠಿ ಕಲಾವಿದ