ಮೈಸೂರು: ರಾಜ್ಯ ಸರ್ಕಾರ ಶಾಸಕರ ಅನುದಾನ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ದೂರಿದರು.
ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಅನುದಾನ ದೊರೆತಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅನುದಾನ ದೊರೆತಿದೆ ಎಂಬುದನ್ನು ವಿಶ್ವನಾಥ್ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.
ಜಿ.ಪಂ. ಯಾರಿಗೂ ಅನ್ಯಾಯವಾಗಿಲ್ಲ: ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಯಾರಿಗೂ ರಾಜಕೀಯವಾಗಿ ಅನ್ಯಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಚಂದ್ರಿಕಾ ಸುರೇಶ್ ಹಾಗೂ ಮಂಜುನಾಥ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯಿತು. ಹೀಗಾಗಿ ಇಬ್ಬರ ನಡುವೆ ಅಧಿಕಾರ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಹಣ ನೀಡಿ ಮೋಸ ಹೋಗಬೇಡಿ: ಮೈಮುಲ್ ಸಿಬ್ಬಂದಿ ನೇಮಕಾತಿ ವಿಚಾರವಾಗಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಹಣ ನೀಡಿ ಮೋಸ ಹೋಗಬಾರದು ಎಂದು ತಿಳಿಸಿದರು.
ನ್ಯಾಯಾಲಯದ ತೀರ್ಪು ಹೊರಬೀಳುವ ಮುನ್ನವೇ ನೇಮಕಾತಿ ಪ್ರಕ್ರಿಯೆ ಮುಗಿಸಲು ಮೈಮುಲ್ ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ ಈಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದರೂ ನಂತರ ತೀರ್ಪಿನ ಆಧಾರದಲ್ಲಿಯೇ ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮೋಸ ಹೋಗಬಾರದೆಂದು ಹೇಳಿದರು.