ಚಂದನವನದೊಂದಿಗೆ ಶ್ರೀಗಳ ಚೆಂದದ ನಂಟು

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠ ಮತ್ತು ಚಿತ್ರರಂಗಕ್ಕೆ ಅವಿನಾಭಾವ ನಂಟು. ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳಿಗೆ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಸಿಕ್ಕಿದೆ. ಅದೇ ರೀತಿ ಸಿನಿಮಾದವರೂ ಮಾಡುವ ಹೊಸ ಕಾರ್ಯಕ್ಕೆ ಕೈ ಹಾಕಿದರೆ, ಮಠಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದು ಬರುವುದು ವಾಡಿಕೆ. ಹಲವು ಸಿನಿಮಾಗಳು ಸಿದ್ಧಗಂಗಾ ಮಠದಲ್ಲೇ ಚಿತ್ರೀಕರಣಗೊಂಡಿದ್ದೂ ಉಂಟು.

ಸೂರಿಗೂ ಮಠಕ್ಕೂ ಇದೇ ನಂಟು: ‘ಟಗರು’ ಸಿನಿಮಾದಲ್ಲಿ ಸಿದ್ಧಗಂಗಾ ಮಠವೂ ಪ್ರಮುಖ ಪಾತ್ರವಹಿಸಿತ್ತು. ಅನಾಥನಾಗಿ ಹುಟ್ಟಿದ ಕಥಾನಾಯಕ, ಮಠಕ್ಕೆ ಸೇರಿ ಶ್ರೀಗಳ ಕೈಯಲ್ಲಿ ಅಕ್ಷರ ಕಲಿತು, ಮುಂದೊಂದು ದಿನ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿರುತ್ತಾನೆ. ಬಳಿಕ ಮಠಕ್ಕೆ ಬಂದು ಶ್ರೀಗಳ ದರ್ಶನ ಪಡೆದು ತೆರಳುತ್ತಾನೆ. ಈ ಸನ್ನಿವೇಶವನ್ನು ಸಿದ್ಧಗಂಗಾ ಮಠದಲ್ಲಿ ಚಿತ್ರಿಸಲಾಗಿದ್ದು, ಮಠದ ಆವರಣ, ಮಕ್ಕಳ ಪ್ರಾರ್ಥನೆ, ಊಟದ ವ್ಯವಸ್ಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿತ್ತು. ಖುದ್ದು ಶ್ರೀಗಳೇ ಶಿವರಾಜ್​ಕುಮಾರ್​ಗೆ ಆಶೀರ್ವದಿಸುವ ದೃಶ್ಯ ಚಿತ್ರದಲ್ಲಿತ್ತು. 2016ರಲ್ಲಿ ಅಂಬರೀಷ್, ಪುನೀತ್ ರಾಜ್​ಕುಮಾರ್ ನಟನೆಯ ‘ದೊಡ್ಮನೆ ಹುಡ್ಗ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದ ಹಾಡುಗಳನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳ ಸಮ್ಮುಖದಲ್ಲೇ ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ನಿರ್ದೇಶಕ ಸೂರಿ ಸಹ ಪ್ರತಿಕ್ರಿಯೆ ನೀಡಿದ್ದಾರೆ. ‘ಸಿದ್ಧಗಂಗಾ ಮಠದ ಬಗ್ಗೆ ಚಿಕ್ಕಂದಿನಿಂದಲೂ ಏನೋ ಕುತೂಹಲ. ಸಾವಿರಾರು ಮಕ್ಕಳಿಗೆ ಏಕಕಾಲದಲ್ಲಿ ಅನ್ನ, ಅಕ್ಷರ, ಜ್ಞಾನ ನೀಡುವ ಕಾಯಕ ಸಾಮಾನ್ಯದ್ದಲ್ಲ. ಆ ಕಾರ್ಯವನ್ನು ಅಷ್ಟೇ ಅಚ್ಚುಕಟ್ಟಾಗಿ ಶಿವಕುಮಾರ ಸ್ವಾಮಿಗಳು ಮಾಡುತ್ತಿದ್ದರು. ಅವರ ಕೈಯಲ್ಲಿ ಬೆಳೆದ ಸಾವಿರಾರು ಮಕ್ಕಳು ಇಂದು ಉನ್ನತ ಹುದ್ದೆಯಲ್ಲಿರುವ ಉದ್ದೇಶಕ್ಕೆ ‘ಟಗರು’ ಚಿತ್ರದಲ್ಲಿ ಆ ಸಂದರ್ಭವನ್ನು ಸೃಷ್ಟಿಸಲಾಯಿತು. ನನ್ನ ಪಾಲಿಗೆ ಅವರೇ ದೇವರು’ ಎನ್ನುತ್ತಾರೆ ಸೂರಿ.

ಸಿದ್ಧಗಂಗಾ ಚಿತ್ರದಲ್ಲಿ ನಟಿಸಿದ್ದರು ಶ್ರೀಗಳು: 2012ರಲ್ಲಿ ಜಿ ಮೂರ್ತಿ ನಿರ್ದೇಶನದಲ್ಲಿ ‘ಸಿದ್ಧಗಂಗಾ’ ಶೀರ್ಷಿಕೆಯ ಚಿತ್ರವೊಂದು ತೆರೆಕಂಡಿತ್ತು. ನಿಡಸಾಲೆ ಪುಟ್ಟಸ್ವಾಮಯ್ಯ ನಿರ್ಮಾಣ ಮಾಡಿದ್ದ ಈ ಚಿತ್ರವನ್ನು ಬರೋಬ್ಬರಿ 12 ದಿನಗಳ ಕಾಲ ಮಠದಲ್ಲಿಯೇ ಸೆರೆಹಿಡಿಯಲಾಗಿತ್ತು. ಮಠದ ಹಳೇ ವಿದ್ಯಾರ್ಥಿ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ರೇವಣ ಸಿದ್ದಯ್ಯ ಅವರ ಜೀವನವನ್ನು ಆಧರಿಸಿ ‘ಸಿದ್ಧಗಂಗಾ’ ಚಿತ್ರ ಮಾಡಲಾಗಿತ್ತು. ಅನಾಥ ಹುಡುಗ ಐಪಿಎಸ್ ಅಧಿಕಾರಿ ಆದ ಬಗೆ, ಆತನ ಸಾಧನೆಗೆ ಸ್ಪೂರ್ತಿಯಾದ ಕಥೆಯನ್ನು ಸಿನಿಮಾ ಮೂಲಕ ಹೇಳಲಾಗಿತ್ತು. ‘ಶ್ರೀಗಳೊಂದಿಗೆ ಸಿನಿಮಾ ನೆಪದಲ್ಲಿ 12 ದಿನ ಕಳೆದಿದ್ದು ಜೀವನದ ಸಾರ್ಥಕ ಕ್ಷಣಗಳಲ್ಲೊಂದು. ಇಂಥದೊಂದು ಸಿನಿಮಾ ಮಾಡುತ್ತಿದ್ದೇವೆ ಎಂದಾಗ, ತುಂಬು ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲ ಚಿತ್ರದ ಆರು ದೃಶ್ಯಗಳಲ್ಲಿ ಶ್ರೀಗಳು ಕಾಣಿಸುತ್ತಾರೆ. ಮಠದಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳನ್ನು ಪಾತ್ರಧಾರಿಯಾಗಿ ಆಯ್ದುಕೊಂಡಿದ್ದೆವು. ಸಾವಿರಾರು ಮಕ್ಕಳೊಂದಿಗೆ ಏಕಕಾಲದಲ್ಲಿ ನಡೆಯುವ ಪ್ರಾರ್ಥನೆ, ಪೂಜೆ, ದಾಸೋಹ ಎಲ್ಲವೂ ನಮ್ಮ ಚಿತ್ರದಲ್ಲಿ ಸೆರೆಯಾಗಿತ್ತು. ಸಿನಿಮಾ ಸಿದ್ಧಗೊಂಡ ಬಳಿಕ ಶ್ರೀಗಳಿಗೆ ವಿಶೇಷ ಪ್ರದರ್ಶನ ಆಯೋಜಿಸಿದ್ದೆವು. ಮಠದಲ್ಲಿದ್ದ 10ಸಾವಿರಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಸಿನಿಮಾ ತೋರಿಸಿದ್ದೆವು’ ಎಂದು ಮಾಹಿತಿ ನೀಡುತ್ತಾರೆ ನಿರ್ವಪಕ ಪುಟ್ಟಸ್ವಾಮಯ್ಯ.

ಕಾಯಕಯೋಗಿ ಚಿತ್ರಕ್ಕೆ ಸಿದ್ಧತೆ

ನಿರ್ದೇಶಕ ಪುರುಷೋತ್ತಮ್ ಸಿದ್ಧಗಂಗಾ ಮಠದ ಇತಿಹಾಸದ ಬಗ್ಗೆ 2008ರಲ್ಲಿ ‘ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ’ ಸಿನಿಮಾ ಮಾಡಿದ್ದರು. ವಿಶೇಷವೆಂದರೆ, ಆ ಸಿನಿಮಾದಲ್ಲಿ ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್, ಶ್ರೀನಿವಾಸ್​ವುೂರ್ತಿ, ದೊಡ್ಡಣ್ಣ ಸೇರಿ ಕನ್ನಡದ ಅನೇಕ ಕಲಾವಿದರು ಬಣ್ಣ ಹಚ್ಚಿದ್ದರು. ಅಲ್ಲದೆ, ಮಠದ ಮಹತ್ವ ಸಾರುವ ಅನೇಕ ಆಡಿಯೋ ಕ್ಯಾಸೆಟ್​ಗಳನ್ನು ಪುರುಷೊತ್ತಮ್ ಬಿಡುಗಡೆ ಮಾಡಿದ್ದಾರೆ. ಅವರೀಗ ಶ್ರೀ ಶಿವಕುಮಾರ ಸ್ವಾಮೀಜಿಗಳ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಏಳು ತಿಂಗಳ ಹಿಂದೆಯೇ ‘ಕಾಯಕ ಯೋಗಿ ನಡೆದಾಡುವ ದೇವರು’ ಶೀರ್ಷಿಕೆಯಡಿಯಲ್ಲಿ ಸಿನಿಮಾಕ್ಕೆ ಚಾಲನೆ ಸಿಕ್ಕಿದೆ. ಸ್ವತಃ ಸ್ವಾಮೀಜಿಗಳೇ ಅದಕ್ಕೆ ಕ್ಲಾಪ್ ಮಾಡಿದ್ದರು. ಅವರ ಬದುಕಿನ ಸಂಪೂರ್ಣ ಚಿತ್ರಣವನ್ನು ಈ ಸಿನಿಮಾದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಲಿದ್ದೇವೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಪುರುಷೋತ್ತಮ್.