ಕುಂಭಮೇಳದ ಕನ್ನಡ ನಂಟು

ಸನಾತನ ಧರ್ಮದ ಶ್ರದ್ಧಾಳುಗಳ ಪಾಲಿಗೆ ಕುಂಭಮೇಳ ಎಂದರೆ ಅತ್ಯಪೂರ್ವ ಅವಕಾಶ. ಈ ಮಹಾಪರ್ವ ಆರಂಭವಾಗಿರುವ ಪ್ರಯಾಗರಾಜ್​ನಲ್ಲಿ ಕಾಶೀ ಜ್ಞಾನಸಿಂಹಾಸನಪೀಠದ ಜಂಗಮವಾಡಿ ಮಠವಿದೆ. ಈ ಮಠದ ಕಿರುಪರಿಚಯ ಇಲ್ಲಿದೆ. 

| ಪ್ರಶಾಂತ ರಿಪ್ಪನ್​ಪೇಟೆ

ಭಾರತದ ಸುದೀರ್ಘ ಸಾಂಸ್ಕೃತಿಕ ಇತಿಹಾಸ ಮತ್ತು ಪರಂಪರೆಯಲ್ಲಿ ಕುಂಭಮೇಳವು ಅತ್ಯಂತ ಬೃಹತ್ ಧಾರ್ವಿುಕ ಕಾರ್ಯಕ್ರಮ. ದೇಶದ ನಾಲ್ಕು ಕಡೆಗಳಲ್ಲಿ ನಡೆಯುವ ಈ ಧರ್ಮಸಂಗಮದಲ್ಲಿ ದೇಶ-ವಿದೇಶಗಳ ಕೋಟ್ಯಂತರ ಜನರು ಪಾಲ್ಗೊಳ್ಳುತ್ತಾರೆ. ಪ್ರಯಾಗರಾಜ್​ನಲ್ಲಿ (ಅಲಹಾಬಾದ್) ನಡೆಯುತ್ತಿರುವ ಕುಂಭಮೇಳಕ್ಕೂ ಕನ್ನಡನಾಡಿಗೂ ಧಾರ್ವಿುಕ ಸಂಬಂಧವಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮಕ್ಷೇತ್ರದಲ್ಲಿ ಕಾಶೀಪೀಠದ ಜಂಗಮವಾಡಿ ಮಠವಿದ್ದು ಇದು ಕನ್ನಡನಾಡಿನಿಂದ ಹೋಗುವ ಭಕ್ತರಿಗೆ ಭವ್ಯ ಸ್ವಾಗತವನ್ನು ನೀಡುತ್ತಿದೆ. ಸಂಗಮಕ್ಷೇತ್ರದಲ್ಲಿ ಭಕ್ತರು ವರ್ಷಪೂರ್ತಿ ಪುಣ್ಯಸ್ನಾನ ಮಾಡುತ್ತಾರೆ. ಹಾಗೆ ಪುಣ್ಯಸ್ನಾನಕ್ಕಾಗಿ ದಕ್ಷಿಣಭಾರತದಿಂದ ಆಗಮಿಸುವ ಯಾತ್ರಿಕರಿಗೆ ಇಲ್ಲಿ ವಸತಿ, ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಅದೇ ರೀತಿ ಬೃಹತ್ ಮಟ್ಟದಲ್ಲಿ ನಡೆಯುವ ಕುಂಭಮೇಳದ ಸಂದರ್ಭದಲ್ಲಿ ಏಕಕಾಲಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಭಕ್ತರಿಗೆ ಊಟ-ವಸತಿ ಇತ್ಯಾದಿ ಸೌಕರ್ಯಗಳ ಅವ್ಯವಸ್ಥೆಯುಂಟಾಗಿ ತೊಂದರೆಯಾಗುವುದನ್ನು ತಪ್ಪಿಸಲು ಶ್ರೀಮಠದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ದಕ್ಷಿಣದಲ್ಲಿ ಪ್ರಬಲವಾಗಿರುವ ವೀರಶೈವ ಧರ್ಮ-ಸಂಸ್ಕೃತಿಯನ್ನು ಉತ್ತರದಲ್ಲಿ ಪ್ರಸಾರ ಮಾಡಿದ ಕೀರ್ತಿ ಕಾಶಿ ಜ್ಞಾನಸಿಂಹಾಸನ ಪೀಠಕ್ಕಿದೆ. ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾಧಿಪತಿಗಳಾದ ನಂತರ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ವೀರಶೈವ ಪರಂಪರೆ ಹಾಗೂ ಭಾರತೀಯ ಸಂಸ್ಕೃತಿ ಪ್ರಸಾರಕ್ಕೆ ಸಾಕಷ್ಟು ಕಾರ್ಯಗಳನ್ನು ನಡೆಸುತ್ತಿದ್ದಾರೆ. ಪ್ರಯಾಗರಾಜ್​ನಲ್ಲಿರುವ ಜಂಗಮವಾಡಿ ಶಾಖಾಮಠದ ಮೂಲಕ ಧರ್ಮ-ಸಂಸ್ಕೃತಿಯ ಪ್ರಸಾರಕ್ಕೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಕುಂಭಮೇಳ ಕಾರ್ಯಕ್ರಮಕ್ಕೆ ಶ್ರೀಮಠ ಸಜ್ಜಾಗಿದೆ. ಮಾಘ ಪೌರ್ಣಿಮೆಯಿಂದ ಮೂರು ದಿನ (ಫೆ. 19ರಿಂದ 21) ಸ್ವತಃ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕುಂಭಮೇಳದಲ್ಲಿ ಪಾಲ್ಗೊಂಡು ಮಂಗಲಸ್ನಾನ ಹಾಗೂ ಭಕ್ತರಿಗೆ ದರ್ಶನಾಶೀರ್ವಾದ ನೀಡಲಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಅದರಲ್ಲೂ ವಿಶೇಷವಾಗಿ ಕರ್ನಾಟಕ ಪ್ರಾಂತ್ಯದ ಬಹಳಷ್ಟು ಮಠಾಧೀಶರು, ಭಕ್ತರು ಪಾಲ್ಗೊಳ್ಳಲಿದ್ದಾರೆ.

ಧಾರ್ವಿುಕ ಸಂಗಮ ಪ್ರಯಾಗರಾಜ್: ಪ್ರಯಾಗವೆಂದರೆ ಎರಡು ನದಿಗಳು ಸೇರುವ ಸಂಗಮ ಎಂದರ್ಥ. ನಮ್ಮ ದೇಶದಲ್ಲಿ ಇಂತಹ ಅನೇಕ ಪ್ರಯಾಗಗಳಿವೆ. ಆ ಎಲ್ಲ ಪ್ರಯಾಗಗಳಿಗಿಂತಲೂ ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮ ಅತ್ಯಂತ ಪವಿತ್ರ ಮತ್ತು ವಿಶೇಷವಾಗಿದ್ದು, ಆ ಕಾರಣಕ್ಕಾಗಿ ಪ್ರಯಾಗಗಳ ರಾಜ ಎನ್ನುವ ಹಿನ್ನೆಲೆಯಲ್ಲಿ ಪ್ರಯಾಗರಾಜ್ ಎಂದು ಕರೆಯುತ್ತಾರೆ. ಅಲಹಾಬಾದಿನ ಹೆಸರನ್ನು ಸರ್ಕಾರ ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಿದೆ. ಜಾತಿ, ಜನಾಂಗ, ಧರ್ಮ, ಭಾಷೆ, ಪ್ರದೇಶದ ಭಿನ್ನತೆಯಿಂದ ಪ್ರತ್ಯೇಕಗೊಂಡಿರುವ ಭಾರತೀಯರು ಕುಂಭಮೇಳದ ನೆಪದಲ್ಲಿ ಒಂದೇ ಉದ್ದೇಶಕ್ಕಾಗಿ ಒಂದೇ ಸ್ಥಳದಲ್ಲಿ ಸೇರಿ ಜಾಗತಿಕ ಸಮನ್ವಯ ಸಂದೇಶವನ್ನು ಸಾರುವ ಮೂಲಕ ಪ್ರಯಾಗರಾಜ್ ಕ್ಷೇತ್ರವನ್ನು ಧರ್ಮಸಂಗಮವಾಗಿಸಲಿದ್ದಾರೆ.

ಕುಂಭ ಪರ್ವಕಾಲದಲ್ಲಿ ಪ್ರಯಾಗದ ಸಂಗಮಸ್ಥಾನದಲ್ಲಿ ಸ್ನಾನ ಮಾಡುವುದರಿಂದ ಜೀವಾತ್ಮನು ತನ್ನ ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ ಎಂಬ ಧಾರ್ವಿುಕ ನಂಬಿಕೆಯಿದ್ದು ಆ ಕಾರಣದಿಂದಲೇ ದೇಶವಿದೇಶಗಳಿಂದ ಕೋಟ್ಯಂತರ ಆಸ್ತಿಕರು ಪ್ರಯಾಗಕ್ಕೆ ಆಗಮಿಸುತ್ತಾರೆ.