ಗೆಲುವಿನ ಅಂತರಕ್ಕಿಂತ ತಿರಸ್ಕೃತ ಮತಗಳೇ ಅಧಿಕ !

| ಇಮಾಮಹುಸೇನ್ ಗೂಡುನವರ

ಬೆಳಗಾವಿ: ಅದು 1989ರ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ. ಆಗ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಹುರಿಯಾಳಾಗಿದ್ದ ಎಸ್.ಬಿ.ಸಿದ್ನಾಳ 2,10,329 ಮತ ಪಡೆದು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಜನತಾದಳದ ಅಭ್ಯರ್ಥಿ ಎ.ವಿ.ಪಾಟೀಲ (1,87,281 ಪಡೆದ ಮತ) ವಿರುದ್ಧ 23,048 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಅಚ್ಚರಿ ಎಂದರೆ, ಈ ಚುನಾವಣೆಯಲ್ಲಿ 35,634 ಮತಗಳು ತಿರಸ್ಕೃತಗೊಂಡಿದ್ದವು, ಈ ಸಂಖ್ಯೆ ಗೆಲುವಿನ ಅಂತರಕ್ಕಿಂತ ಅಧಿಕ ಎನ್ನುವುದು ರೋಚಕ ಸಂಗತಿ!

ಆಗಿನ ಚುನಾವಣೆಯಲ್ಲಿ 10,21,080 ಮತದಾರರಿದ್ದರು. ಈ ಪೈಕಿ 6,82,682 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಪೈಕಿ 6,47,192 ಮತಗಳು ಪುರಸ್ಕೃತಗೊಂಡಿದ್ದವು. 10 ಅಭ್ಯರ್ಥಿಗಳು ಕಣದಲ್ಲಿದ್ದರು.
ಇಂತದ್ದೇ ಮತ್ತೊಂದು ಪ್ರಸಂಗಕ್ಕೆ ಸಾಕ್ಷಿಯಾಗಿದ್ದು 1984ರಲ್ಲಿ ಚಿಕ್ಕೋಡಿ (ಮೀಸಲು) ಲೋಕಸಭಾ ಕ್ಷೇತ್ರದ ಚುನಾವಣೆ.

ಆಗ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಬಿ.ಶಂಕರಾನಂದ 2,28,030 ಮತ ಗಳಿಸಿ ಸತತ ಐದನೇ ಬಾರಿಗೆ ಗೆಲುವು ಸಾಧಿಸಿದ್ದರು. ಅವರ ಪ್ರತಿಸ್ಪರ್ಧಿಯಾಗಿದ್ದ ಜನತಾಪಕ್ಷದ ಅಣ್ಣಪ್ಪ ಕಲ್ಲಪ್ಪ ಅವರು 2,24,385 ಮತ ಪಡೆದು ಶಂಕರಾನಂದಗೆ ತೀವ್ರ ಪೈಪೋಟಿ ಒಡ್ಡಿದ್ದರು. ಅಂತಿಮವಾಗಿ 3,645 ಮತಗಳ ಅಂತರದಿಂದಷ್ಟೇ ಕಲ್ಲಪ್ಪ ಪರಾಭವಗೊಂಡಿದ್ದರು. ಈ ಚುನಾವಣೆಯಲ್ಲೂ ಗೆಲುವಿನ ಅಂತರಕ್ಕಿಂತ ಹೆಚ್ಚು (11,933 ಮತಗಳು) ಮತಗಳು ತಿರಸ್ಕೃತಗೊಂಡಿದ್ದವು. 7,05,279 ಮತದಾರರ ಪೈಕಿ 4,89,225 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಪೈಕಿ 4,77,292 ಮತಗಳು ಪುರಸ್ಕೃತಗೊಂಡಿದ್ದವು. ಆಗಿನ ಚುನಾವಣೆಯಲ್ಲೂ 10 ಅಭ್ಯರ್ಥಿಗಳು ಕಣದಲ್ಲಿದ್ದರು.

1984ರ ಚಿಕ್ಕೋಡಿ (ಮೀಸಲು) ಲೋಕಸಭಾ ಕ್ಷೇತ್ರದ ಮತ್ತು 1989ರ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗಳ ಫಲಿತಾಂಶಗಳ ಮೇಲೆ ಕಣ್ಣು ಹಾಯಿಸಿದಾಗ ಮತಗಳ ಚಲಾವಣೆ ವೇಳೆ ಎಚ್ಚರ ವಹಿಸುವುದು ಎಷ್ಟು ಅಗತ್ಯ ಎಂಬುದು ಅರಿವಿಗೆ ಬರುತ್ತದೆ.

ಒಂದು ವೇಳೆ ಚಲಾವಣೆಗೊಂಡ ಎಲ್ಲ ಮತಗಳು ಪುರಸ್ಕೃತವಾಗಿದ್ದರೆ ಫಲಿತಾಂಶದಲ್ಲಿ ಮಹತ್ತರ ಬದಲಾವಣೆ ಆಗುವ ಎಲ್ಲ ಸಾಧ್ಯತೆಯೂ ಇತ್ತು. ಚುನಾವಣೆ ಫಲಿತಾಂಶದ ಸ್ವಾರಸ್ಯವನ್ನು ಕೆಲ ರಾಜಕೀಯ ಮುಖಂಡರು ಈಗಲೂ ನೆನೆಯುತ್ತಾರೆ.

ಈಗ ಭರಪೂರ ಜಾಗೃತಿ!ಈ ಹಿಂದಿನ ಚುನಾವಣೆಗಳಲ್ಲಿ ಮತದಾರರಿಗೆ ಸ್ಪಷ್ಟ ತಿಳಿವಳಿಕೆ ಇಲ್ಲದ ಕಾರಣ ಹೆಚ್ಚಿನ ಪ್ರಮಾಣದ ಮತಗಳು ತಿರಸ್ಕೃತವಾಗುತ್ತಿದ್ದವು. ಆದರೆ, ಇತ್ತೀಚಿನ ಚುನಾವಣೆಗಳಲ್ಲಿ ಇವಿಎಂ ಯಂತ್ರಗಳು ಬಂದಿವೆ. ಕೇಂದ್ರ ಚುನಾವಣೆ ಆಯೋಗವು ಜಿಲ್ಲಾ ಸ್ವೀಪ್ ಸಮಿತಿಗಳ ಮೂಲಕ ನಿರಂತರವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಹಾಗಾಗಿ, ಹಿಂದಿನ ಮೂರ‌್ನಾಲ್ಕು ಚುನಾವಣೆಗಳಲ್ಲಿ ಮತಗಳ ತಿರಸ್ಕೃತ ಪ್ರಮಾಣ ಕ್ಷೀಣಿಸುತ್ತ ಬಂದಿದೆ.

ಹೆಚ್ಚು ತಿರಸ್ಕೃತ ಯಾವಾಗ?

1999ರ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಚಲಾವಣೆಯಾದ 8,24,061 ಮತಗಳ ಪೈಕಿ 7,81,767 ಮತಗಳು ಪುರಸ್ಕೃತಗೊಂಡಿದ್ದವು. 42,162 ಮತಗಳು ತಿರಸ್ಕೃತಗೊಂಡಿದ್ದವು. ಆಗ, ಕಾಂಗ್ರೆಸ್ ಹುರಿಯಾಳು ಅಮರಸಿಂಹ ಪಾಟೀಲ (3,83,444 ಮತ) ಅವರು ಬಿಜೆಪಿಯ ಬಾಬಾಗೌಡ ಪಾಟೀಲ (3,33,546 ಮತ) ವಿರುದ್ಧ 49,898 ಮತಗಳ ಅಂತರದಿಂದ ಗೆದ್ದಿದ್ದರು. ಹಾಗಾಗಿ, ತಿರಸ್ಕೃತಗೊಂಡಿದ್ದ ಎಲ್ಲ ಮತಗಳು ಪುರಸ್ಕೃತವಾಗಿದ್ದರೂ ಫಲಿತಾಂಶದಲ್ಲಿ ಬದಲಾವಣೆ ಸಾಧ್ಯವಿರಲಿಲ್ಲ.

1989ರ ಚಿಕ್ಕೋಡಿ (ಮೀಸಲು) ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 9,25,097 ಮತದಾರರಿದ್ದರು, ಆಗ, ಚಲಾವಣೆಗೊಂಡ 6,36,543 ಮತಗಳ ಪೈಕಿ 5,96,195 ಮತಗಳು ಪುರಸ್ಕೃತವಾಗಿದ್ದವು. ಆಗ ಕಾಂಗ್ರೆಸ್‌ನ ಬಿ.ಶಂಕರಾನಂದ (2,74,975 ಮತಗಳು) ಆರ್‌ಪಿಐನ ಅವಿನಾಶದತ್ತ ಕಟ್ಟಿ (2,13,711 ಮತ) ವಿರುದ್ಧ 61,264 ಮತಗಳ ಅಂತರದಲ್ಲಿ ಗೆದ್ದಿದ್ದರು. ಆಗ, ಇಲ್ಲಿ 40,348 ಮತಗಳು ತಿರಸ್ಕೃತಗೊಂಡಿದ್ದವು.