ಬೈಲಕುಪ್ಪೆ: ಸಾರ್ವಜನಿಕರ ದೂರಿನ ಮೇರೆಗೆ ರಸ್ತೆ ನಿರ್ಮಾಣಕ್ಕಾಗಿ ತಹಸೀಲ್ದಾರ್ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿಯೂರು ಗ್ರಾಮದ ಗೌರಿ ಕೆರೆ ಮುಖ್ಯರಸ್ತೆಯಿಂದ ದೊಡ್ಡಮ್ಮನ ದೇವಸ್ಥಾನದ ತನಕ ನಕಾಶೆಯಲ್ಲಿ ತೋರಿಸಿದಂತೆ ರಸ್ತೆ ಇದ್ದರೂ ಕೆಲವರು ಒತ್ತುವರಿ ಮಾಡಿಕೊಂಡಿದ್ದು, ತಿರುಗಾಡಲು ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದರು.
ಅಲ್ಲದೆ ಇತ್ತೀಚೆಗೆ ಕುಂದುಕೊರತೆ ಆಲಿಸಲು ಗ್ರಾಮಕ್ಕೆ ಆಗಮಿಸಿದ್ದ ಪಶು ಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರ ಗಮನ ಸೆಳೆದಿದ್ದ ಗ್ರಾಮಸ್ಥರು ರಸ್ತೆ ಸಮಸ್ಯೆ ನಿವಾರಿಸಲು ಮನವಿ ಮಾಡಿಕೊಂಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ತಹಸೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಗ್ರಾಮದ ಮುಖಂಡರ ಮಾತುಗಳನ್ನು ಆಲಿಸಿದರು. ಬಳಿಕ ಸರ್ವೇ ನಂ.59ರಲ್ಲಿ ಗೌರಿಕೆರೆ ಮುಖ್ಯ ರಸ್ತೆಯಿಂದ ದೊಡ್ಡಮ್ಮನ ದೇವಸ್ಥಾನದವರೆಗೆ ನಿಯಮಾನುಸಾರವಾಗಿ ರಸ್ತೆ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಭೂಮಾಪನ ಅಧಿಕಾರಿ ಗಿರೀಶ್, ಆರ್‌ಐ ಆನಂದ್, ಗ್ರಾಮ ಲೆಕ್ಕಾಧಿಕಾರಿ ದುರ್ಗೇಶ್, ಆವರ್ತಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ಶಿವು, ಗ್ರಾಮದ ಮುಖಂಡರಾದ ಮುರುಗೇಶ್, ಜಾಜ್, ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್, ಗ್ರಾಮಸ್ಥರಾದ ಹರೀಶ್, ಹೊನ್ನಪ್ಪ, ದೇವಯ್ಯ, ಮಣಿಕಂಠ, ರಮೇಶ್, ಡಿ.ರವಿ, ಜಗದೀಶ್, ಮುತ್ತುರಾಜ್, ಬಸವರಾಜ್, ಈಶ್ವರ, ಕಣ್ಣನ್, ಕಾವೇರಿ ಸ್ವಾಮಿ ಇತರರು ಇದ್ದರು.