ಗೋಕಾಕ: ಒತ್ತಡದ ಬದುಕಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪರಿಹಾರ ಕಂಡುಕೊಳ್ಳಲು ಆರೋಗ್ಯ ಶಿಬಿರ ಸಹಕಾರಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಪ್ಪ ಗಡೇದ ಹೇಳಿದರು.
ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಜಂಗಮ ಕ್ಷೇಮಾಭಿವದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಮುಂಬರುವ ರೋಗಗಳನ್ನು ಗುರುತಿಸಬಹುದು. ಆರೋಗ್ಯಕರ ಸಮಾಜ ನಿರ್ಮಿಸಲು ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಅತಿಯಾದ ಮೊಬೈಲ್ ಬಳಕೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರೂ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆದುಕೊಳ್ಳಬೇಕು. ದೈಹಿಕ ಚಟುವಟಿಕೆಗಳು, ವ್ಯಾಯಾಮ ಮಾಡಿದರೆ ಆರೋಗ್ಯವಂತರಾಗಬಹುದು ಎಂದು ವಿವರಿಸಿದರು.
ಇಲ್ಲಿನ ಮುಪ್ಪಯ್ಯ ಮಠದ ರಾಚೋಟೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಜಿಪಂ ಮಾಜಿ ಸದಸ್ಯರಾದ ಟಿ.ಆರ್. ಕಾಗಲ, ಮಡೆಪ್ಪ ತೋಳಿನವರ, ಗ್ರಾಪಂ ಸದಸ್ಯ ಸುರೇಶ ಸನದಿ, ಮಾಜಿ ನಗರಾಧ್ಯಕ್ಷ ಜಯಾನಂದ ಹುಣಚ್ಯಾಳಿ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ್, ಡಾ.ಸಂಜಯ ಹೊಸಮಠ, ಪ್ರಕಾಶ ಕಂಬಿ ಇತರರಿದ್ದರು.