| ಕೀರ್ತಿನಾರಾಯಣ ಸಿ. ಬೆಂಗಳೂರು
ಇ-ಕಾರ್ವಿುಕ ತಂತ್ರಾಂಶ ದುರ್ಬಳಕೆ ಮಾಡಿಕೊಂಡು ಅಂಗಡಿ, ವಾಣಿಜ್ಯ ಸಂಸ್ಥೆಗಳ ನೋಂದಣಿ ಸರ್ಟಿಫಿಕೇಟ್ಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡುವ ಮೂಲಕ ಬ್ಯಾಂಕ್ಗಳಿಂದ ಲಕ್ಷಾಂತರ ರೂ. ಸಾಲ ಪಡೆದು ವಂಚಿಸುತ್ತಿರುವ ಜಾಲವನ್ನು ಕಾರ್ವಿುಕ ಇಲಾಖೆ ಬಯಲಿಗೆಳೆದಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಖತರ್ನಾಕ್ ದಂಧೆ ಬಯಲಾಗಿದ್ದು, ಸಾವಿರಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅಕ್ರಮ ಎಸಗಿರುವ ವಾಣಿಜ್ಯ ಸಂಸ್ಥೆಗಳ ಮಾಲೀಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗುತ್ತಿದೆ.
ಅಂಗಡಿ- ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಅನ್ವಯ ಇ-ತಂತ್ರಾಂಶದ ಮುಖೇನ ನೋಂದಣಿ ಪತ್ರ ವಿತರಿಸಲಾಗುತ್ತಿದೆ. ಸರ್ಟಿಫಿಕೇಟ್ನಲ್ಲಿ ಸಂಸ್ಥೆಯ ನೋಂದಣಿ ಸಂಖ್ಯೆ, ನೋಂದಣಿ ಅವಧಿ, ಅವಧಿ ಮುಕ್ತಾಯ ಮೊದಲಾದ ವಿವರ ನಮೂದಿಸಲಾಗಿರುತ್ತದೆ. ಆದರೆ, ಇ-ತಂತ್ರಾಂಶ ದುರುಪಯೋಗಪಡಿಸಿಕೊಂಡು ವಿವರಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ವಿಚಾರ ಉಪ ಕಾರ್ವಿುಕ ಆಯುಕ್ತರ (ಪ್ರಚಾರ ಮತ್ತು ಅಂಕಿ-ಅಂಶ) ಪರಿಶೀಲನೆಯಲ್ಲಿ ದೃಢಪಟ್ಟಿದ್ದು, ಈ ಬಗ್ಗೆ ಕಾರ್ವಿುಕ ಇಲಾಖೆಗೆ ವರದಿ ಸಲ್ಲಿಕೆ ಮಾಡಲಾಗಿದೆ.
ಪ್ರಾಥಮಿಕ ಪರಿಶೀಲನೆ ನಡೆಸಿದ ವೇಳೆ ಸಾವಿರಾರು ಅಂಗಡಿಗಳು ಹಾಗೂ ಸಂಸ್ಥೆಗಳು ಅಕ್ರಮದಲ್ಲಿ ಭಾಗಿಯಾಗಿ ರುವುದು ಪತ್ತೆಯಾಗಿದ್ದು, ಅವುಗಳ ಡೇಟಾಗಳನ್ನು ಸಂಗ್ರಹಿಸಲಾಗಿದೆ. ಯಾವುದೇ ರೀತಿಯ ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡುವುದು ಕೂಡ ಕ್ರಿಮಿನಲ್ ಅಪರಾಧವಾಗುತ್ತದೆ. ಹೀಗಾಗಿ ಸಂಸ್ಥೆಯ ಮಾಲೀಕರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಆರಂಭವಾಗಿದೆ.
ಎಫ್ಐಆರ್ ದಾಖಲಿಸುವ ಮುನ್ನ ಸಂಬಂಧಪಟ್ಟ ಸಂಸ್ಥೆಯ ಮಾಲೀಕರು, ಆಡಿಟರ್ ಹಾಗೂ ಸಾಲ ಕೊಡಿಸಿರುವ ಏಜೆನ್ಸಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಲಾಗುತ್ತಿದೆ. ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳು ಹಾಗೂ ಅಕ್ರಮಕ್ಕೆ ಸಹಕರಿಸಿದವರ ಮಾಹಿತಿ ಒದಗಿಸಲು ಸಂಸ್ಥೆಗಳ ಮಾಲೀಕರಿಗೆ ಅವಕಾಶ ಮಾಡಿಕೊಡಲಾಗಿದೆ. ಅಕ್ರಮ ಎಸಗಿಲ್ಲ ಎಂದಾದಲ್ಲಿ ಅದನ್ನು ಸಾಬೀಪಡಿಸುವ ಜತೆಗೆ ಅಕ್ರಮಕ್ಕೆ ಸಹಕರಿಸಿದವರ ಮಾಹಿತಿಯನ್ನು ವಿಚಾರಣೆ ವೇಳೆ ಬಹಿರಂಗಪಡಿಸಲು ಸೂಚನೆ ನೀಡಲಾಗಿದೆ.
ಏನೆಲ್ಲ ತಿದ್ದುಪಡಿ? : ಉದಾಹರಣೆಗೆ 2022ರಲ್ಲಿ ಪೆಟ್ರೋಲ್ ಬಂಕ್ವೊಂದನ್ನು ಆರಂಭಿಸಲಾಗಿದೆ. 5 ವರ್ಷದ ಅವಧಿಗೆ ಲೇಬರ್ ಲೈಸೆನ್ಸ್ ಕೊಡಲಾಗುತ್ತದೆ. ನೋಂದಣಿ ಪತ್ರ ಸಂಖ್ಯೆ36/52/ಎಸ್/219/2022 ಎಂದು ನಮೂದಾಗಿದೆ. ನೋಂದಣಿ ದಿನಾಂಕ 30/06/2022 ಹಾಗೂ ಅವಧಿ ಮುಕ್ತಾಯದ ದಿನಾಂಕ 31/12/2026 ಎಂದು ಸರ್ಟಿಫಿಕೇಟ್ನಲ್ಲಿ ನಮೂದಾಗಿರುತ್ತದೆ. ಸಂಸ್ಥೆ ಆರಂಭಿಸಿ ಕನಿಷ್ಠ 3 ವರ್ಷ ಆಗಿದ್ದರಷ್ಟೇ ಬ್ಯಾಂಕ್ ಸಾಲ ಸಿಗುತ್ತದೆ. ಹೀಗಾಗಿ 2020ರಲ್ಲೇ ಸಂಸ್ಥೆ ಶುರುವಾಗಿದ್ದು, 2025ಕ್ಕೆ ಅವಧಿ ಮುಕ್ತಾಯವಾಗುತ್ತದೆ ಎಂದು ನಮೂದಾ ಗುವಂತೆ ವಿವರಗಳನ್ನು ತಿದ್ದುಪಡಿ ಮಾಡಿ ವಂಚಿಸಲಾಗಿದೆ.
ಹೇಗೆ ನಡೆಯುತ್ತೆ ದಂಧೆ?: ಕಾರ್ವಿುಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದಲ್ಲಿ ಆಡಿಟರ್ಗಳು ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಂಸ್ಥೆಯ ನೋಂದಣಿ ಸಂಖ್ಯೆ, ಜಿಎಸ್ಟಿ ಕಾಪಿಯನ್ನು ಆಡಿಟರ್ಗಳಿಗೆ ಕೊಟ್ಟರೆ 8ರಿಂದ 10 ದಿನದಲ್ಲಿ ತಿದ್ದುಪಡಿ ನೋಂದಣಿ ಪತ್ರ ವಾಟ್ಸ್ಆಪ್ನಲ್ಲೇ ಬರುತ್ತದೆ. ಸಣ್ಣ ಪ್ರಮಾಣದ ಅಂಗಡಿಯಾದರೆ ಒಂದು ಸರ್ಟಿಫಿಕೇಟ್ಗೆ 9ರಿಂದ 10 ಸಾವಿರ ರೂ. ಕೊಡಬೇಕು. ದೊಡ್ಡ ವಾಣಿಜ್ಯ ಸಂಸ್ಥೆಯಾದರೆ 10 ರಿಂದ 20 ಸಾವಿರ ರೂ.ವರೆಗೂ ಕೊಡಬೇಕಾಗುತ್ತದೆ.
ಎರಡು ತಿಂಗಳಲ್ಲೇ ಕಂಪನಿ ಮಾಯ!: ಫಾಮ್ರ್ ಸಿ ಅನ್ವಯ ನೋಂದಣಿ ಪತ್ರ ಕೊಡಲು ಅವಕಾಶ ಇದೆ. ಇ-ತಂತ್ರಾಂಶ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ತಿದ್ದುಪಡಿ ಮಾಡಲಾಗುತ್ತದೆ. ಬ್ಯಾಂಕ್ಗಳು ಆನ್ಲೈನ್ ಪರಿಶೀಲನೆ ನಡೆಸಿದಾಗ ಸರಿಯಾಗಿದೆ ಎಂದು 2 ರಿಂದ 3 ತಿಂಗಳ ಮಾತ್ರ ತೋರಿಸುತ್ತದೆ. ನಂತರ ಪರಿಶೀಲಿಸಿದರೆ ಅದೇ ಸರ್ಟಿಫಿಕೇಟ್ನಲ್ಲಿ ಬೇರೊಂದು ಕಂಪನಿ ಹೆಸರು ಮತ್ತು ವಿವರ ತೋರಿಸುತ್ತದೆ.
ದಂಧೆ ಬೆಳಕಿಗೆ ಬಂದಿದ್ಹೇಗೆ? : ಇ-ಕಾರ್ವಿುಕ ತಂತ್ರಾಂಶ ದುರ್ಬಳಕೆಯಾಗುತ್ತಿರುವ ಬಗ್ಗೆ ಕಾರ್ವಿುಕ ಇಲಾಖೆಗೆ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ನೋಂದಾಯಿತ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಸರ್ಟಿಫಿಕೇಟ್ಗಳನ್ನು ಅಕ್ರಮವಾಗಿ ಮಾರ್ಪಾಡು ಮಾಡಿರುವುದು ಬಯಲಾಗಿದೆ. ನೋಂದಣಿ ಸಂಖ್ಯೆ, ನೋಂದಣಿ ಅವಧಿ, ಇನ್ನಿತರ ವಿವರಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕಾರ್ವಿುಕ ಇಲಾಖೆ ತಾಂತ್ರಿಕ ಸಹಾಯಕ ಚಂದನ್ 2024 ಆ.7ರಂದು ಕಾರ್ವಿುಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಇದರನ್ವಯ ತಪ್ಪಿತಸ್ಥ ಮಾಲೀಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸುವಂತೆ ಕಾರ್ವಿುಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಯಾವ ಸಂಸ್ಥೆ ಎಷ್ಟು ಸಾಲ?: ಕಿರಾಣಿ ಅಂಗಡಿ, ಜ್ಯೂಸ್ ಸೆಂಟರ್, ಚಿಕನ್ ಅಂಗಡಿ ಯಿಂದ ಪೆಟ್ರೋಲ್ ಬಂಕ್, ವಾಣಿಜ್ಯ ಸಂಸ್ಥೆಗಳು 30 ಲಕ್ಷ ರೂ.ನಿಂದ ಶುರುವಾಗಿ 1, ಒಂದೂವರೆ ಕೋಟಿ ರೂ.ವರೆಗೆ ಬ್ಯಾಂಕ್ಗಳಿಂದ ಸಾಲ ಪಡೆದಿವೆ.
* ಬ್ಯಾಂಕ್ಗಳಿಂದ ಸಾಲ ಪಡೆಯಲು ನಕಲಿ ಪತ್ರ ಸೃಷ್ಟಿ
* ಅಂಗಡಿ, ವಾಣಿಜ್ಯ ಸಂಸ್ಥೆ ಹೆಸರಲ್ಲಿ ಲಕ್ಷ ಲಕ್ಷ ಲೋನ್
* 3-4 ವರ್ಷದಿಂದ ಇರುವಂತೆ ಸರ್ಟಿಫಿಕೇಟ್ ಸೃಷ್ಟಿ
* ಕಾರ್ವಿುಕ ಇಲಾಖೆ ಅಧಿಕಾರಿ, ಆಡಿಟರ್ಸ್, ಏಜೆನ್ಸಿ ಭಾಗಿ
ಅಕ್ರಮ ತಿದ್ದುಪಡಿ ಏಕೆ?
* ಸಂಸ್ಥೆಗೆ ಬ್ಯಾಂಕ್ ಸಾಲ ಶುರುವಾದ ನಿರ್ದಿಷ್ಟ ವರ್ಷದ ವಿವರ ಕೊಡಬೇಕು
* ಸಂಸ್ಥೆ ಆರಂಭವಾಗಿ 2-3 ವರ್ಷಗಳು ಆಗಿದ್ದರಷ್ಟೇ ಬ್ಯಾಂಕ್ ಸಾಲ ಸಿಗುತ್ತದೆ
* ಇದೇ ಕಾರಣಕ್ಕೆ ಹೊಸ ಸಂಸ್ಥೆಗಳ ಮಾಲೀಕಕರಿಂದ ಸಾಲಕ್ಕಾಗಿ ಅಡ್ಡದಾರಿ
* ಆಡಿಟರ್ಗೆ ಲಂಚ ಕೊಟ್ಟು ಸಾಲಕ್ಕೆ ಬೇಕಾದಂತೆ ಸರ್ಟಿಫಿಕೇಟ್ ಪಡೆಯುತ್ತಾರೆ
5 ವರ್ಷಕ್ಕೊಮ್ಮೆ ನೋಂದಣಿ ನವೀಕರಣ ಮಾಡಬೇಕಿದ್ದು, ಹಿಂದಿನ ದಿನಾಂಕ ನಮೂದಿಸುವ ಹಿನ್ನೆಲೆಯಲ್ಲಿ ಶುಲ್ಕ ಪಾವತಿ ರೂಪದಲ್ಲಿ ಇಲಾಖೆಗೆ ಲಾಭವೇ ಆಗುತ್ತಿದೆ. ಯಾವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ತಿಳಿಯಲು ನೋಟಿಸ್ ಕೊಟ್ಟು ಮಾಲೀಕರ ವಿಚಾರಣೆ ನಡೆಸಲು ಸೂಚಿಸಲಾಗಿದೆ.
| ಡಾ.ಎಚ್.ಎನ್.ಗೋಪಾಲಕೃಷ್ಣ ಕಾರ್ವಿುಕ ಆಯುಕ್ತ
ಸಂಸ್ಥೆಗಳ ನೋಂದಣಿ ವೇಳೆ ಹಿಂದಿನ ದಿನಾಂಕ ನಮೂದಿಸಲಾಗುತ್ತಿದೆ ಎಂಬುದು ಹೊಸ ವಿಚಾರ. ಈ ಬಗ್ಗೆ ನಮಗೆ ಅಚ್ಚರಿ ಆಗುತ್ತಿದೆ. ಇದರಿಂದ ಸರ್ಕಾರದ ಖಜಾನೆಗೆ ಯಾವುದೇ ನಷ್ಟವಾಗುತ್ತಿಲ್ಲ. ಯಾವ ಕಾರಣಕ್ಕೆ ಈ ರೀತಿ ಅಕ್ರಮ ಎಸಗಲಾಗುತ್ತಿದೆ ಎಂಬುದರ ಕುರಿತು ತನಿಖೆ ಮಾಡಲಾಗುತ್ತಿದೆ.
| ಸಂತೋಷ್ ಲಾಡ್ ಕಾರ್ವಿುಕ ಸಚಿವ
Mpox vaccine : ಮಂಕಿ ಪಾಕ್ಸ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ!