ಕೃಷಿ ಪದ್ಧತಿ ಬದಲಾವಣೆಗೆ ಪ್ರೇರೆಪಿಸಿ: ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಸಲಹೆ

Regional Imbalance Redressal Committee Chairpersons Meeting Mandya

ಮಂಡ್ಯ: ಜಿಲ್ಲೆಯಲ್ಲಿ ರೈತರು ಕಬ್ಬು ಮತ್ತು ಭತ್ತದ ಬೆಳೆಯನ್ನು ಹೆಚ್ಚು ಬೆಳೆಯುತ್ತಾರೆ. ಒಂದೇ ರೀತಿಯ ಬೆಳೆಯನ್ನು ಹೆಚ್ಚು ಬೆಳೆಯುವುದರಿಂದ ಮಣ್ಣಿನ ಪೋಷಕಾಂಶ ಕಡಿಮೆಯಾಗುತ್ತದೆ ಎಂದು ಆರ್ಥಿಕ ತಜ್ಞರೂ ಆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಮಿತಿಯ ಸದಸ್ಯರು, ಜಿಲ್ಲೆಯ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ವಿವಿಧ ಬೆಳೆ ಬೆಳೆಯುವ ಹಾಗೂ ಮಾರುಕಟ್ಟೆ ಕಲ್ಪಿಸಿಕೊಡುವ ಬಗ್ಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ನೀಡುವ ಸಲಹೆಗಳನ್ನು ರೈತರು ಅಳವಡಿಸಿಕೊಳ್ಳುವ ಬಗ್ಗೆ ಪ್ರೇರಿಪಿಸಬೇಕು. ಕೃಷಿ ಪದ್ಧತಿಯಲ್ಲಿ ಹೊಸ ಬದಲಾವಣೆಗಳನ್ನು ತರುವ ಬಗ್ಗೆ ಚಿಂತಿಸಬೇಕು ಎಂದರು.
ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಯೋಜನೆಗಳನ್ನು ರೂಪಿಸಿ ಮಹತ್ತರವಾದ ಬದಲಾವಣೆ ತರುವುದರಿಂದ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬಹುದು. ಸೇವಾ ವಲಯದಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ ಮುಖ್ಯವಾಗಿ ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ವಲಯದಲ್ಲಿ ಅಭಿವೃದ್ಧಿಯ ಸೂಚ್ಯಂಕ ಕಡಿಮೆ ಇದೆ. ಈ ವಲಯಗಳನ್ನು ಅಭಿವೃದ್ಧಿ ಗೊಳಿಸಲು ಉತ್ತಮ ಯೋಜನೆ ಹಾಗೂ ಸಲಹೆಗಳು ಬೇಕಿದೆ ಎಂದರು.
ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತ ಡಾ.ಡಿ.ಎಂ.ನಂಜುಂಡಪ್ಪ ಅಧ್ಯಕ್ಷತೆಯ ಸಮಿತಿಯು 2002ರಲ್ಲಿ ವರದಿ ನೀಡಿದ ನಂತರ ಹಿಂದುಳಿದ ತಾಲೂಕುಗಳು ಯಾವ ರೀತಿ ಬೆಳವಣಿಗೆಯಾಗಿದೆ. ಯಾವ ತಾಲೂಕುಗಳು ಇನ್ನೂ ಹಿಂದುಳಿದ ಪ್ರದೇಶಗಳಾಗಿ ಮುಂದುವರೆದಿವೆ ಎಂಬುದನ್ನು ಸಮಿತಿ ಪರಾಮರ್ಶಿಸಲಿದೆ. ಅಭಿವೃದ್ಧಿಯನ್ನು ಸೂಚ್ಯಂಕದ ಅಧಾರದ ಮೇಲೆ ನೋಡಲಾಗುತ್ತದೆ. ಹಿಂದುಳಿದಿದ್ದಲ್ಲಿ ಯಾವ ಕಾರಣಕ್ಕಾಗಿ ಹಾಗೂ ಯಾವ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ ಎಂಬುದನ್ನು ಸಮಿತಿಯು ಪರಾಮರ್ಶಿಸಲಿದೆ. ತಲಾ ಆದಾಯ, ಶಿಕ್ಷಣ, ಆರೋಗ್ಯ, ಇನ್ನಿತರ ಕ್ಷೇತ್ರಗಳಲ್ಲಿನ ಸುಧಾರಣೆ, ಬೆಳವಣಿಗೆಯ ಬಗ್ಗೆಯು ಸಮಿತಿಯು ಪರಿಶೀಲಿಸಲಿದೆ. ಎಲ್ಲ ಅಂಶಗಳನ್ನು ಗಮನಿಸಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಆರ್.ವಿಶಾಲ್ ಮಾತನಾಡಿ, ಮಂಡ್ಯ ಜಿಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯಗಳು ಬೇಕಿದೆ. ಮೊದಲಿಗೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಟ್ರಾಮಾ ಕೇರ್ ಸೆಂಟರ್, ನೆಫ್ರೋ ಮತ್ತು ನ್ಯೂರೋ ತಜ್ಞರ ಅವಶ್ಯಕತೆ ಕುರಿತು ಸಭೆಯಲ್ಲಿ ಚರ್ಚಿಸಿ ಆರೋಗ್ಯ ಕ್ಷೇತ್ರದ ಅವಶ್ಯಕತೆ ಕುರತು ವರದಿ ಸಲ್ಲಿಸುವುದಾಗಿ ತಿಳಿಸಿದರು.
ಗುಣಮಟ್ಟದ ಶಿಕ್ಷಣ ತಳಹಂತದಿಂದಲೇ ಪ್ರಾರಂಭವಾಗಬೇಕು. ವಿದ್ಯಾರ್ಥಿಗಳಿಗೆ ಐದು ಮತ್ತು ಒಂಭತ್ತನೆಯ ತರಗತಿಗಳಲ್ಲಿ ವಿಶೇಷ ಪರೀಕ್ಷೆ ನಡೆಸಿ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ. ಶಿಕ್ಷಕರಿಗೆ ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಿ ಇದರಿಂದ ಹತ್ತನೇ ತರಗತಿಯ ಫಲಿತಾಂಶ ಉತ್ತಮಗೊಳ್ಳಲಿದೆ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ಹಾಗೂ ಕಾಲೇಜು ತಾಲೂಕು ಮಟ್ಟದಲ್ಲಿ ಹೆಚ್ಚಾಗಬೇಕು. ಇದರಿಂದ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಕಡಿಮೆಯಾಗುತ್ತದೆ. ಕಾಳುಗಳು, ಸಿರಿಧಾನ್ಯ ಬೆಳೆಗಳನ್ನು ಬೆಳೆಯುವುದು. ಹಾಗೂ ಸಿರಿಧಾನ್ಯದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಮಾರುಕಟ್ಟೆ ಕಲ್ಪಿಸುವುದರಿಂದ ಬದಲಾವಣೆಗಳನ್ನು ತರಬಹುದು ಎಂದು ಅಭಿಪ್ರಾಯಪಟ್ಟರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳನ್ನು ತೊಡಗಿಸಿಕೊಂಡು ಅಣಬೆ ಬೇಸಾಯ ಮಾಡಿಸಿ ಅವರಿಗೆ ಮಾರುಕಟ್ಟೆ ಕಲ್ಪಿಸಿ ಕೊಡಬಹುದು. ತೋಟಗಾರಿಕೆ ಇಲಾಖೆ ವತಿಯಿಂದ ಡ್ರಾೃಗನ್ ಫ್ರೂಟ್ ಸೇರಿದಂತೆ ಹೊಸ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಅಂತೆಯೇ ಕೆಆರ್‌ಎಸ್ ಹಿನ್ನೀರಿನಲ್ಲಿ ಸಾಹಸ ಕ್ರೀಡೆಯನ್ನು ಹೆಚ್ಚು ಪ್ರಚಲಿತ ಮಾಡುವುದರಿಂದ ಉದ್ಯೋಗಗಳನ್ನು ಕಲ್ಪಿಸಬಹುದು. ಇದರೊಂದಿಗೆ ವಿಲೇಜ್ ಸ್ಟೇ ಎಂಬ ವಿಷಯದೊಂದಿಗೆ ನಗರ ಪ್ರದೇಶದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದರು.
ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಸೂರ್ಯ ನಾರಾಯಣ್, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ವಾಣಿಜ್ಯ ಮಂಡಳಿ ಜಿಲ್ಲಾಧ್ಯಕ್ಷ ಪ್ರಭಾಕರ್ ಇತರರಿದ್ದರು.

blank
Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank