More

    ಬಜೆಟ್ ಸಿದ್ಧತೆಗೆ ಜನಾಭಿಪ್ರಾಯ ಸಂಗ್ರಹಿಸಿ

    ರಾಣೆಬೆನ್ನೂರ: ನಗರಸಭೆ ಆಯವ್ಯಯ ಪೂರ್ವಭಾವಿ ಸಭೆಗೆ ಸದಸ್ಯರನ್ನು ಬಿಟ್ಟರೆ ಯಾರಿಗೂ ತಿಳಿಸಿಲ್ಲ. ನಾವೇ ರ್ಚಚಿಸಿದರೆ ನಗರದಲ್ಲಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ವಿವಿಧ ಸಂಘ-ಸಂಸ್ಥೆ, ಸಂಘಟನೆ, ಸಾರ್ವಜನಿಕರನ್ನು ಕರೆದು ಸಭೆ ನಡೆಸಬೇಕು. ಈ ಸಭೆಯನ್ನು ಇಲ್ಲಿಗೆ ಮೊಟಕುಗೊಳಿಸಬೇಕು ಎಂದು ನಗರಸಭೆ ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದರು.

    ಮಂಗಳವಾರ ಏರ್ಪಡಿಸಿದ್ದ 2021-22ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ವಿಪಕ್ಷದ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಅಧಿಕಾರಿಗಳು ಯಾರಿಗೂ ಮಾಹಿತಿ ನೀಡದ ಕಾರಣ ಸಭೆಗೆ ಯಾರೂ ಬಂದಿಲ್ಲ. ಮಹಿಳಾ, ರೈತ, ಆಟೋರಿಕ್ಷಾ, ಕೂಲಿ ಕಾರ್ವಿುಕರು ಸೇರಿ ಅನೇಕ ಸಂಘ-ಸಂಸ್ಥೆಗಳಿವೆ. ಪ್ರತಿ ಬಡಾವಣೆಯಲ್ಲೂ ಪ್ರಜ್ಞಾವಂತ ಜನರಿದ್ದಾರೆ. ಅವರನ್ನು ಸಭೆಗೆ ಆಹ್ವಾನಿಸಿದರೆ ನಗರದ ಅಭಿವೃದ್ಧಿಗೆ ಉತ್ತಮ ಸಲಹೆ-ಸೂಚನೆ ಸಿಗುತ್ತವೆ. ಅವುಗಳ ಆಧಾರದಲ್ಲಿ ಬಜೆಟ್ ಸಿದ್ಧತೆ ಮಾಡಿಕೊಳ್ಳಿ ಎಂದರು.

    ಆಯುಕ್ತ ಡಾ. ಎನ್. ಮಹಾಂತೇಶ ಪ್ರತಿಕ್ರಿಯಿಸಿ, ಸಭೆ ನಡೆಸುವ ಕುರಿತು ಎಲ್ಲರಿಗೂ ಮಾಹಿತಿ ನೀಡಿದ್ದೇವೆ. ಆದರೆ, ಯಾರೂ ಬಂದಿಲ್ಲ. 2ನೇ ಬಾರಿಗೆ ಸಭೆ ಕರೆದು ಜನಾಭಿಪ್ರಾಯ ಪಡೆಯುತ್ತೇವೆ. ಸದ್ಯ ಬಂದಿರುವ ಸದಸ್ಯರು ಅಭಿಪ್ರಾಯ ತಿಳಿಸಲಿ ಎಂದರು.

    ನಿಂಗರಾಜ ಕೋಡಿಹಳ್ಳಿ ಮಾತನಾಡಿ, ವಿರೋಧ ಪಕ್ಷದ ಸದಸ್ಯರಿಗೆ ನಗರಸಭೆ ಕಟ್ಟಡದಲ್ಲಿ ಪ್ರತ್ಯೇಕ ಕೊಠಡಿ ನೀಡುವಂತೆ ಆಯುಕ್ತರು, ಅಧ್ಯಕ್ಷರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಬಜೆಟ್​ನಲ್ಲಾದರೂ ಮಾಡಿಕೊಡಬೇಕು. ತಾಪಂ ಕಾರ್ಯಾಲಯದ ಜಾಗ ನಗರಸಭೆಗೆ ಸೇರಿದ್ದು. ಅದನ್ನು ತಾಪಂನಿಂದ ಹಿಂಪಡೆದು ವಾಣಿಜ್ಯ ಮಳಿಗೆ ನಿರ್ವಿುಸಿ ಬಾಡಿಗೆಗೆ ನೀಡಿದರೆ ನಗರಸಭೆಗೆ ಆದಾಯ ಬರಲಿದೆ ಎಂದರು.

    ಇದಕ್ಕೆ ಆಕ್ಷೇಪಿಸಿದ ಮಲ್ಲಣ್ಣ ಅಂಗಡಿ, ಸದ್ಯ ಬಜೆಟ್ ಬಗ್ಗೆ ಮಾತ್ರ ರ್ಚಚಿಸಬೇಕು. ವಿರೋಧ ಪಕ್ಷದ ಕೊಠಡಿ ನೀಡುವ ವಿಚಾರ ಸಾಮಾನ್ಯ ಸಭೆ ಅಥವಾ ಆಯುಕ್ತರ ಕಾರ್ಯಾಲಯದಲ್ಲಿ ರ್ಚಚಿಸಿ ಎಂದರು. ಇದಕ್ಕೆ ಆಕ್ರೋಶಗೊಂಡ ವಿರೋಧ ಪಕ್ಷದ ಸದಸ್ಯರು, ಬಜೆಟ್​ನಲ್ಲಿ ಆಗಬೇಕಿರುವ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದೇವೆ. ನಿಮ್ಮ ಸದಸ್ಯರ ತರ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ ಎಂದರು. ಇದರಿಂದ ಪರಸ್ಪರರಲ್ಲಿ ಕೆಲಕಾಲ ವಾಗ್ವಾದ ನಡೆಯಿತು.

    ರಮೇಶ ಕರಡೆಣ್ಣನವರ ಮಾತನಾಡಿ, ರಸ್ತೆ ಬದಿ ತರಕಾರಿ ಮಾರುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕೆಲವು ಬಡಾವಣೆಗಳಲ್ಲಿ ಬಟ್ಟೆ ತೊಳೆಯುವ, ಸ್ನಾನ ಮಾಡಿದ ನೀರು ರಸ್ತೆಯಲ್ಲಿ ಹರಿಯುವ ಸ್ಥಿತಿಯಿದೆ. ಇದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಜೆಟ್​ನಲ್ಲಿ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

    ಇನ್ನುಳಿದಂತೆ ನಗರದ ಬೀದಿ ದೀಪಗಳ ನಿರ್ವಹಣೆ, ಎಲ್​ಇಡಿ ದೀಪ ಅಳವಡಿಕೆ, ಪಾರ್ಕ್ ಅಭಿವೃದ್ಧಿ, ರಸ್ತೆ, ಚರಂಡಿ ದುರಸ್ತಿ, ಫುಟ್​ಪಾತ್ ತೆರವು, ರಾಜಕಾಲುವೆ ಒತ್ತುವರಿ ತೆರವು ಮತ್ತಿತರ ಅಭಿವೃದ್ಧಿ ಕಾರ್ಯ ಮಾಡುವಂತೆ ಶೇಖಪ್ಪ ಹೊಸಗೌಡ್ರ, ಗಂಗಮ್ಮ ಹಾವನೂರ, ಪ್ರಭಾವತಿ ತಿಳವಳ್ಳಿ, ಮಂಜುಳಾ ಹತ್ತಿ, ಮಲ್ಲಣ್ಣ ಅಂಗಡಿ ಇತರರು ಒತ್ತಾಯಿಸಿದರು.

    ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರೆವ್ವ ಚಿಕ್ಕಬಿದರಿ, ಅಧಿಕಾರಿಗಳು ಇದ್ದರು.

    ರಕ್ಷಣೆ ಬದಲು ಭಕ್ಷಣೆ

    ನಗರಸಭೆಯವರು ಜನರನ್ನು ರಕ್ಷಿಸುವ ಬದಲು ಭಕ್ಷಿಸುತ್ತಿದ್ದಾರೆ ಎಂದು ನಾಗರಿಕ ಸುಭಾಸ ಭೂತೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ, ನೀರಿನ ಕರ ಹೆಚ್ಚಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಯಾವ ರಸ್ತೆ ಸರಿಯಾಗಿದೆ ತೋರಿಸಿ ನೋಡೋಣ. ಬೈಕ್, ಸೈಕಲ್ ಅಷ್ಟೇ ಅಲ್ಲ ನಡೆದುಕೊಂಡು ಹೋಗಲೂ ಭಯಪಡುವ ಸ್ಥಿತಿಯಿದೆ. ಹದಗೆಟ್ಟ ರಸ್ತೆಯಲ್ಲಿ ಬಿದ್ದು ಸತ್ತರೆ ಯಾರು ಜವಾಬ್ದಾರರು? ಚರಂಡಿಗಳು ಕೊಳಚೆ ತುಂಬಿ ನಾರುತ್ತಿವೆ. ಕುಡಿಯುವ ನೀರು 10 ದಿನಕ್ಕೊಮ್ಮೆ ಬರುತ್ತಿದೆ. ಹೀಗಾದರೆ ಹೇಗೆ ಜೀವನ ಮಾಡಬೇಕು? ಇದಕ್ಕೆಲ್ಲ ಬಜೆಟ್​ನಲ್ಲಿ ಪರಿಹಾರ ಒದಗಿಸಿ ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts