ಏಕ್ ​ಲವ್ ​ಯಾ

ಬೆಂಗಳೂರು: ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ ‘ಏಕ್ ಲವ್ ಯಾ’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ‘ದಿ ವಿಲನ್’ ಬಳಿಕ ನಿರ್ದೇಶಕ ಪ್ರೇಮ್ ಈ ಸಿನಿಮಾ ಕೈಗೆತ್ತಿಕೊಂಡಿದ್ದು, ಪಾತ್ರವರ್ಗದ ಕಾರಣದಿಂದಲೂ ನಿರೀಕ್ಷೆ ಹುಟ್ಟಿಸಿದ್ದಾರೆ. ಹಲವು ದಿನಗಳ ಹಿಂದೆ ನಟಿ ರಚಿತಾ ರಾಮ್ ಒಂದು ಮುಖ್ಯ ಪಾತ್ರಕ್ಕೆ ಆಯ್ಕೆ ಆಗಿದ್ದರು. ನಂತರ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಕೂಡ ಚಿತ್ರತಂಡ ಸೇರಿಕೊಂಡರು. ಅಷ್ಟಕ್ಕೇ ಮುಗಿಯಿತು ಎಂದುಕೊಳ್ಳುವಂತಿಲ್ಲ. ಈಗ ಮತ್ತೋರ್ವ ಬೆಡಗಿಯನ್ನು ಪ್ರೇಮ್ ಆಯ್ಕೆ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಂಕಿತಾ ನಾಯ್್ಕ ಅವರಿಗೆ ‘ಏಕ್ ಲವ್ ಯಾ’ ಚಿತ್ರದಲ್ಲಿ ಮಣೆ ಹಾಕಲಾಗಿದೆ. ರೂಪದರ್ಶಿಯಾಗಿ ತೊಡಗಿಕೊಳ್ಳುವುದರ ಜತೆ ನಟನೆ ಬಗ್ಗೆಯೂ ಆಸಕ್ತಿ ಹೊಂದಿದ್ದ ಅಂಕಿತಾ ಆಡಿಷನ್ ಮೂಲಕ ಈ ಚಿತ್ರಕ್ಕೆ ಆಯ್ಕೆ ಆಗಿದ್ದು, ಚಂದನವನ ಪ್ರವೇಶಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇದು ಅವರ ಮೊದಲ ಸಿನಿಮಾ ಆಗಲಿದೆ. ಮೂಲಗಳ ಪ್ರಕಾರ, ಅಂಕಿತಾ ನಿಭಾಯಿಸಲಿರುವ ಪಾತ್ರವೇ ಇಡೀ ಕಥೆಗೆ ಟ್ವಿಸ್ಟ್ ನೀಡಲಿದೆಯಂತೆ. ಈಗಾಗಲೇ ಎರಡು ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕಳೆದ 22 ದಿನಗಳಿಂದ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿರುವ ಪ್ರೇಮ್ ಶೀಘ್ರವೇ ಒಂದು ಸಾಹಸ ಸನ್ನಿವೇಶ ಚಿತ್ರೀಕರಿಸಲಿದ್ದಾರೆ. ಆ ಮೂಲಕ ಮೊದಲನೇ ಹಂತದ ಶೂಟಿಂಗ್ ಮುಕ್ತಾಯ ಆಗಲಿದೆ. ಬಳಿಕ ‘ಏಕ್ ಲವ್ ಯಾ’ ಬಳಗ ಮೈಸೂರಿಗೆ ಶಿಫ್ಟ್ ಆಗಲಿದೆ. ಚಿತ್ರಕ್ಕೆ ಮಹೇನ್ ಸಿಂಹ ಛಾಯಾಗ್ರಹಣ ಮಾಡುತ್ತಿದ್ದು, ಸಂಗೀತ ಸಂಯೋಜನೆಯ ಹೊಣೆಯನ್ನು ಅರ್ಜುನ್ ಜನ್ಯ ವಹಿಸಿಕೊಂಡಿದ್ದಾರೆ. ‘ರಕ್ಷಿತಾ ಫಿಲಂ ಫ್ಯಾಕ್ಟರಿ’ ಬ್ಯಾನರ್​ನಲ್ಲಿ ‘ಏಕ್ ಲವ್ ಯಾ’ ತಯಾರಾಗುತ್ತಿದೆ.

Leave a Reply

Your email address will not be published. Required fields are marked *