ರಬಕವಿ-ಬನಹಟ್ಟಿ” ತಾಲೂಕಿನ ಕೃಷ್ಣಾ ನದಿ ತೀರ ಪ್ರದೇಶದ ರೈತರ ಜಮೀನುಗಳಿಗೆ ನುಗ್ಗಿರುವ ಕೃಷ್ಣಾ ನದಿ ನೀರು ಪೂರ್ಣ ಇಳಿದಿಲ್ಲವಾದರೂ, ಬನಹಟ್ಟಿ ನಗರಕ್ಕೆ ನದಿಯಿಂದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಹಿನ್ನೀರು ಸರಿದು ಸಂಚಾರ ಮುಕ್ತವಾಗಿದೆ.
ಮಹಾರಾಷ್ಟ್ರದಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಕೃಷ್ಣಾರ್ಭಟ ಇನ್ನೂ ಮುಂದುವರಿದ್ದಿರಿಂದ ರಬಕವಿಯ ಹಳ್ಳದ ಮೂಲಕ ಹೊಸಪೇಟ, ಗಟ್ಟಗಿ ಬಸವೇಶ್ವರ ದೇಗುಲ, ಕಡಾಲಕಟ್ಟಿ, ಮುತ್ತೂರ, ಯಾತಗೇರಿ ಮತ್ತು ಮಟ್ಟಿಕಲ್ಲಿ ಪ್ರದೇಶಗಳಲ್ಲಿನ ನಾಗರಿಕರು ಆತಂಕಿತರಾಗಿದ್ದರು. ಏತನ್ಮಧ್ಯೆ ಗುರುವಾರ ಸಂಜೆ ಕೃಷ್ಣೆಯ ಮುನಿಸು ಶಮನಗೊಂಡು 4 ಅಡಿಗಳಷ್ಟು ಹಿನ್ನೀರು ಸರಿದಿದ್ದು, ರಬಕವಿ ಜನತೆ ನಿಟ್ಟುಸಿರು ಬಿಟ್ಟಿದಾರೆ. ಹಿಪ್ಪರಗಿ ಜಲಾಶಯದಲ್ಲಿ ಒಳಹರಿವು 2,50,845 ಇದ್ದು, 2,50,095 ಹೊರಹರಿವಿದೆ. ಆಲಮಟ್ಟಿ ಜಲಾಶಯದಲ್ಲಿ ಒಳಹರಿವು 2,63,667 ಇದ್ದರೆ, 1,50,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಕಳೆದ 19 ದಿನಗಳಿಂದ ಕಬ್ಬು ಸೇರಿ ವಿವಿಧ ಬೆಳೆಗಳು ಹಿನ್ನೀರಿನಲ್ಲಿ ನಿಂತು ಕೊಳೆತಿವೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸಂತ್ರಸ್ತರಿಗೆ ಪರಿಹಾರ ಧನ ಕೊಡಬೇಕೆಂದು ತಿಳಿಸಿದ್ದರೂ ಇನ್ನೂ ನಮಗೆ ಸರ್ಕಾರದಿಂದ ಪರಿಹಾರ ಬಂದಿಲ್ಲವೆಂದು ರೈತ ಧುರೀಣ ಭುಜಬಲಿ ವೆಂಕಟಾಪುರ, ಬಬಾಗೌಡ ಪಾಟೀಲ, ಮಹಾವೀರ ಕೊಕಟನೂರ, ಜಯವಂತ ಗುಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಬಕವಿ-ಬನಹಟ್ಟಿ ತಾಲೂಕಿನಲ್ಲಿ 10 ಮನೆಗಳು ಹಾನಿಗೀಡಾಗಿದ್ದು, 12,295 ಹೆಕ್ಟೇರ್ ಕೃಷಿ ಬೆಳೆಗಳು, 7.3 ಹೆಕ್ಟೇರ್ ತೋಟಗಾರಿಕೆ ಬೆಳೆಗಳು, 1.2 ರೇಷ್ಮೆ ಬೆಳೆಗಳು ಹಾನಿಯಾಗಿವೆ. ಲೋಕೋಪಯೋಗಿ ಇಲಾಖೆಯ 1.50 ಜಿಲ್ಲಾ ರಸ್ತೆ, 1 ಸೇತುವೆ, 1 ನಗರ ರಸ್ತೆ, 1 ಶಾಲೆ, 10 ಕೊಠಡಿಗಳು, 8 ಅಂಗನವಾಡಿ ಕಟ್ಟಡಗಳು, 44 ವಿದ್ಯುತ್ ಕಂಬಗಳು, 14 ಪರಿವರ್ತಕಗಳು, 6 ಕಿ.ಮೀ. ತಂತಿಗಳು ಹಾನಿಗೊಳಗಾಗಿವೆ. 5 ಕಾಳಜಿ ಕೇಂದ್ರಗಳ ಪೈಕಿ ಹಳಿಂಗಳಿಯ 40 ಕುಟುಂಬಗಳ 175 ಜನ, 208 ಜಾನುವಾರುಗಳು, ತಮದಡ್ಡಿಯ 23 ಕುಟುಂಬಗಳ 93 ಜನ, 89 ಜಾನುವಾರುಗಳು., ಕುಲಹಳ್ಳಿಯ 29 ಕುಟುಂಬಗಳ 161 ಜನ, 390 ಜಾನುವಾರು, ಹಿಪ್ಪರಗಿಯ 40 ಕುಟುಂಬಗಳ 164 ಜನ, 1280 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಆರ್‌ಜಿಎಚ್‌ಸಿಎಲ್ ತತ್ರಾಂಶದಲ್ಲಿ ಹಾನಿಯ ವಿವರಗಳನ್ನು ನಮೂದು ಮಾಡುವ ಪ್ರಕ್ರಿಯೆ ಆರಂಭದಲ್ಲಿರುತ್ತದೆ ಎಂದು ಜಮಖಂಡಿ ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.