ಹೈದರಾಬಾದ್: ಭಾರತದಲ್ಲಿ ಕರೊನಾ ಲಸಿಕೆ ಅಭಿಯಾನವು ಮೂರನೇ ಹಂತವನ್ನು ಪ್ರವೇಶಿಸುತ್ತಿರುವಂತೆಯೇ, ಮತ್ತೊಂದು ಲಸಿಕೆಗೆ ತುರ್ತು ಬಳಕೆ ಅನುಮತಿ ನೀಡುವಂತೆ ಹೈದರಾಬಾದಿನ ಡಾ.ರೆಡ್ಡೀಸ್ ಲ್ಯಾಬರೇಟರಿ ಕೋರಿದೆ. ರಷಿಯಾದ ಸ್ಪುಟ್ನಿಕ್ ವಿ ಕೋವಿಡ್ 19 ಲಸಿಕೆಯನ್ನು ಭಾರತದಲ್ಲಿ ವಿತರಿಸಲು ಒಪ್ಪಂದ ಮಾಡಿಕೊಂಡಿರುವ ಫಾರ್ಮ ಕ್ಷೇತ್ರದ ದಿಗ್ಗಜ ರೆಡ್ಡೀಸ್ ಲ್ಯಾಬ್, ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ)ಗೆ ಈ ಕುರಿತು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ.
ರಷಿಯಾದ ಗಮೇಲಿಯಾ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ತಯಾರಿಸಿರುವ ಅಡಿನೋವೈರಲ್ ಲಸಿಕೆಯಾದ ಸ್ಪುಟ್ನಿಕ್ ವಿ, ಶೇ.91.6 ರಷ್ಟು ಪರಿಣಾಮಕಾರಿಯಾಗಿರುವ ಜಗತ್ತಿನ ಮೂರು ಲಸಿಕೆಗಳಲ್ಲಿ ಒಂದಾಗಿದೆ. ಈಗಾಗಲೇ ಜಗತ್ತಿನ 26 ದೇಶಗಳಲ್ಲಿ ಇದಕ್ಕೆ ಪರವಾನಗಿ ಸಿಕ್ಕಿದ್ದು, ಈಗಾಗಲೇ 2 ಮಿಲಿಯನ್ ಜನರಿಗೆ ನೀಡಲಾಗಿದೆ ಎಂದು ರೆಡ್ಡೀಸ್ ಲ್ಯಾಬ್ನ ಎಂಡಿ ಜಿ.ವಿ.ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಚುತ್ತಿರುವ ಕರೊನಾ: ಮತ್ತೆ ಸೀಲ್ಡೌನ್ ಸುಳಿಯಲ್ಲಿ ಮುಂಬೈ ನಗರಿ
19,886 ರಷಿಯನ್ನರು ಪಾಲ್ಗೊಂಡ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ನ ಮಧ್ಯಂತರ ವಿಶ್ಲೇಷಣೆಯಲ್ಲಿ ಲಸಿಕೆಯು ಶೇ.91.6 ರಷ್ಟು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಈ ಲಸಿಕೆಯ 2ನೇ ಹಂತದ ಸುರಕ್ಷತೆ ವಿವರ ಮತ್ತು 3ನೇ ಹಂತದ ಮಧ್ಯಂತರ ವರದಿಯನ್ನು ಡಿಸಿಜಿಐ ಪರಿಶೀಲನೆಗೆ ನೀಡಲಾಗುವುದು. 3ನೇ ಹಂತದ ಕ್ಲಿನಿಕಲ್ ಟ್ರಯಲ್ ಫೆಬ್ರವರಿ 21 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲೇ ತಯಾರಾದ ಸೆರಂ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್ ಮತ್ತು ಭಾರತ್ ಬಯೊಟೆಕ್ನ ಕೋವಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ವಿ.ಜಿ.ಸೊಮಾನಿ ಅವರು ಜನವರಿ 3 ರಂದು ಅನುಮೋದನೆ ನೀಡಿದ್ದರು. ತದನಂತರ ಆರಂಭವಾದ ಕೋವಿಡ್ 19 ಲಸಿಕೆ ಅಭಿಯಾನದಲ್ಲಿ ಈಗಾಗಲೇ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ